ಮೈಸೂರು: ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಇಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎರಡನೇ ಹಂತದಲ್ಲಿ ಸೋಂಕಿತ ಪ್ರಕರಣಗಳು ಅತಿ ವೇಗವಾಗಿ ಹರಡುತ್ತಿವೆ.ಈ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದರು.
ಸೋಂಕು ಹರಡದಂತೆ ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ವಹಿವಾಟು ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಸೇವೆ, ಸರಕು ಸಾಗಣೆ ವಾಹನ, ಸರ್ಕಾರಿ ವಾಹನ, ಹಾಪ್ ಕಾಮ್ಸ್ , ಹೋಮ್ ಡೆಲಿವರಿ ಹಾಗೂ ಕೃಷಿ ಚಟುವಟಿಕೆಗಳಿಗೆ ರಾತ್ರಿ 9 ಗಂಟೆಗೆ ವರೆಗೆ ಅವಕಾಶವಿರುತ್ತದೆ ಎಂದರು.
ಇನ್ನು ಬಸ್ಸು , ರೈಲು, ವಿಮಾನಗಳಲ್ಲಿ ಬೇರೆ ಊರುಗಳಿಂದ ಬಂದು ತಮ್ಮ ಮನೆಗಳಿಗೆ ತೆರಳಲಿರುವ ಸಾರ್ವಜನಿಕರಿಗೆ ಈ ಕರ್ಫ್ಯೂ ಅನ್ವಯಿಸುವುದಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಂಡು ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜುಲೈ 5 ರಿಂದ ಆ.2ರ ವರೆಗೆ ಭಾನುವಾರದಂದು ಸಂಪೂರ್ಣ ಲಾಕ್ ಡೌನ್:
ಜುಲೈ 5 ರಿಂದ ಆಗಸ್ಟ್ 2ರವರೆಗೂ ಎಲ್ಲಾ ಭಾನುವಾರಳಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಭಾನುವಾರದಂದು ಲಾಕ್ ಡೌನ್ ಮಾಡಲಾಗುತ್ತಿದ್ದು , ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ಹೊರತು ಪಡಿಸಿ ಉಳಿದ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ವ್ಯಾಪಾರ- ವಹಿವಾಟು ಸ್ಥಳಗಳಲ್ಲಿ ಅಂತರ ಕಾಯ್ದುಕೊಂಡು ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಇಲ್ಲವಾದರೆ 200 ರೂಪಾಯಿ ದಂಡ ವಿಧಿಸಲಾಗುವುದು. ಅಂಗಡಿ ಮಾಲೀಕರು ಗ್ರಾಹಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮಳಿಗೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಸೂಚಿಸಿದರು.
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮದುವೆ ಸಮಾರಂಭಗಳಲ್ಲಿ 50 ಜನ ಹಾಗೂ ಅಂತ್ಯಕ್ರಿಯೆಯಲ್ಲಿ 20 ಮಂದಿ ಅಷ್ಟೇ ಇರಬೇಕು. ವಯಸ್ಸಾದವರು, ಮಕ್ಕಳು, ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು ಅನಗತ್ಯ ವಾಹನ ಸಂಚಾರ, ಅಂಗಡಿ ಮುಂಗಟ್ಟು ಸೇರಿದಂತೆ ಲಾಕ್ ಡೌನ್ ಅವಧಿಯಲ್ಲಿ ಬಂದ್ ಮಾಡುವಂತೆ ಆಯುಕ್ತ ಡಾ.ಚಂದ್ರಗುಪ್ತ ಆದೇಶಿಸಿದರು.