ಮೈಸೂರು: ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯು ಈ ಬಾರಿ ಬಹುತೇಕ ರಾಜ್ಯಗಳಲ್ಲಿ ಗೆಲುವು ಸಾಧಿಸಲಿದ್ದು, ಜನರು ಯಾವ ತೀರ್ಪು ಕೊಡುತ್ತಾರೋ ಅದನ್ನು ನಾವು ಸ್ವೀಕಾರ ಮಾಡುತ್ತೇವೆ. ಕಾಂಗ್ರೆಸ್ನವರಂತೆ ನಾವು ಗೆದ್ದರೆ ಜನಾದೇಶ, ಸೋತರೆ ಇವಿಎಂ ಮಷಿನ್ ಸರಿ ಇಲ್ಲ ಎಂದು ಹೇಳುವುದಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ನಗರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಬೇಕು ಅಗತ್ಯ ಬಿದ್ದರೆ ಕೇಂದ್ರದ ಸಹಾಯವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಸಂವಿಧಾನಕ್ಕೆ ಮಾಡಿದ ಅಪಚಾರ ಎಂದ ರವಿ: ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧದ ಪ್ರಕರಣದ ಸಿಬಿಐ ತನಿಖೆ ಆದೇಶ ಹಿಂತೆಗೆದುಕೊಂಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಇದು ಕಳ್ಳರ ಕೈಯಲ್ಲಿ ಬೀಗ ಕೊಟ್ಟ ಹಾಗಿದೆ. ಹೀಗಾದರೆ ನ್ಯಾಯಾಲಯ ಯಾಕೆ ಬೇಕು? ನಿರಪರಾಧಿಯಾಗಿದ್ದರೆ ಡಿ.ಕೆ ಶಿವಕುಮಾರ್ ತನಿಖೆಯನ್ನು ಏಕೆ ಎದುರಿಸಬೇಕು. ಅವರು ಒಂದು ರಾಂಗ್ ಪ್ರಾಕ್ಟೀಸ್ಗೆ ಮುನ್ನುಡಿ ಬರೆದಿದ್ದಾರೆ. ಅಧಿಕಾರಕ್ಕೆ ಬಂದಾಗ ಈ ರೀತಿ ಕೇಸ್ ವಾಪಸ್ ತೆಗೆದುಕೊಂಡರೆ ಸಂವಿಧಾನ ಎಲ್ಲಿ ಉಳಿಯುತ್ತದೆ. ಕೆಟ್ಟ ಸಂಪ್ರದಾಯಕ್ಕೆ ಸಾಂಪ್ರದಾಯಿಕ ನಗರಿಯ ಸಿಎಂ ಒಪ್ಪಿಗೆ ಕೊಟ್ಟಿರುವುದು ಕರಾಳ ಅಧ್ಯಾಯ ಎಂದು ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದರು.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ: ಕರ್ನಾಟಕ ಸರ್ಕಾರದ ರಾಜ್ಯ ಶಿಕ್ಷಣ ನೀತಿ ಈ ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ. ಶಿಕ್ಷಣ ಎನ್ನುವುದು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಕರ್ನಾಟಕದವರೇ ಆದ ಕಸ್ತೂರಿರಂಗನ್ ನೇತೃತ್ವದಲ್ಲಿ 12 ಜನರ ತಂಡ ದೇಶದ ಉದ್ದಗಲಕ್ಕೂ ಜನರ ಅಭಿಪ್ರಾಯ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಶಿಫಾರಸು ಮಾಡಿದೆ ಎಂದರು.
ಆಧುನಿಕ ಸವಾಲುಗಳನ್ನು ಎದುರಿಸಿ, ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡು ನಮ್ಮ ಮಕ್ಕಳನ್ನು ಸ್ವಾವಲಂಬಿಯಾಗಿ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಪ್ರಾದೇಶಿಕ ಭಾಷೆ ರಕ್ಷಣೆ ಮಾಡಲು ಮಾತೃಭಾಷೆಯನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ಮಕ್ಕಳು ಡಿಗ್ರಿ ಪಡೆದು ನಿರುದ್ಯೋಗಿಗಳಾಗಬಾರದು ಎಂಬ ಉದ್ದೇಶದಿಂದ ಕೌಶಲ್ಯ ತರಬೇತಿಯನ್ನು ಅಳವಡಿಸಲಾಗಿದೆ. ಇದನ್ನು ಯಾಕೆ ವಿರೋಧಿಸುತ್ತಾರೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಎಸ್ಇಪಿ ಜಾರಿಗೆ ತರಲು ಹೊರಟಿರುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಜಾತಿಗಳ ನಡುವೆ ಜಗಳ ಹಚ್ಚಿಸಿ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡಿ ಲೋಕಸಭೆಗೆ ಲಾಭ ಪಡೆಯುವ ಉದ್ದೇಶದಿಂದ ಜಾತಿಗಣತಿ ಅಂಶವನ್ನು ಬಳಕೆ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಈ ಸಂಶಯವನ್ನು ದೂರ ಮಾಡಬೇಕಾಗಿದ್ದು, ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ನ್ಯಾಯ ಕೊಡಿಸಬೇಕು. ಅದನ್ನು ಬಿಟ್ಟು ಜಾತಿಗಣತಿ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ ಜಗಳ ಮಾಡಿಸಬಾರದು. ಈಗಿನ ಚುನಾವಣೆಗಳಲ್ಲಿ ಜಾತಿ ಮತ್ತು ಹಣ ಇದ್ದರೆ ಚುನಾವಣೆ ಗೆಲ್ಲಬಹುದೆಂಬ ಮನಸ್ಥಿತಿ ಇದೆ ಎಂದರು.