ಮೈಸೂರು : ತನ್ನ ಅಕ್ಕ ಮತ್ತು ತಂಗಿಗೆ ಇನ್ನೂ ಮದುವೆಯಾಗಿಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಮಹೇಶ್ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತ ಮಹೇಶ್ಗೆ ಒಬ್ಬ ತಂಗಿ ಮತ್ತು ಒಬ್ಬಳು ಅಕ್ಕ ಇದ್ದಾರೆ. ಇವರಿಬ್ಬರಿಗೂ ಇನ್ನೂ ವಿವಾಹವಾಗಿರಲಿಲ್ಲ ಎಂಬ ಚಿಂತೆ ಮಹೇಶ್ನನ್ನು ಕಾಡುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಮಹೇಶ್ ತಮ್ಮ ಜಮೀನಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹುಲ್ಲಹಳ್ಳಿ ಪಿಎಸ್ಐ ರಮೇಶ್ ಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಲ್ ಕಲೆಕ್ಟರ್ನ ಮೃತದೇಹ ಕೆರೆಯ ಬಳಿ ಪತ್ತೆ : ಯುವತಿಯೊಬ್ಬಳಿಗೆ ಹಣ ಕೊಡಬೇಕೆಂದು ತಾಯಿ ಬಳಿ ಹೇಳಿ ತೆರಳಿದ್ದ ಯುವಕ ಕೆರೆ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಹುಣಸೂರು ತಾಲೂಕು ಬಿಳಿಕೆರೆ ಬಳಿ ನಡೆದಿದೆ. ಕೊಳಗಟ್ಟ ಗ್ರಾಮದ ನಿವಾಸಿ ಅರುಣ್ ಕುಮಾರ್(21) ಮೃತ ಯುವಕ.
ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಅರುಣ್ ಕುಮಾರ್ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಟಿದ್ದನು. ಮ್ಯಾನೇಜರ್ ಕರೆಯುತ್ತಿದ್ದಾರೆ ಎಂದು ಮನೆಯಿಂದ ಹೊರಟಿದ್ದ ಅರುಣ್ ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ. ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರು ಅರುಣ್ಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯೊಂದರ ಬಳಿ ಅರುಣ್ ಮೃತದೇಹ ಪತ್ತೆಯಾಗಿದೆ.
ಅರುಣ್ ಯುವತಿಯೊಬ್ಬಳಿಗೆ ಹಣ ಕೊಡಬೇಕು ಎಂದು ತಾಯಿ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಮಗನ ಸಾವಿನ ಬಗ್ಗೆ ತಾಯಿ ಲತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಮಹಿಳೆ ಆತ್ಮಹತ್ಯೆ : ಮಹಿಳೆಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯ ನಾಗೇನಹಳ್ಳಿಯ ಶ್ರೀರಾಮ್ ಸುಹಾನ ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು. ಲಖನೌ ಮೂಲದ ಅಮೃತ ಶರ್ಮಾ (27) ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಮಹಿಳೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಅವರು ಸಾವನ್ನಪ್ಪಿದ್ದರು.
ಲಖನೌ ಮೂಲದ ಅಮೃತಾ ಅವರಿಗೆ ಎರಡು ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗಳು ನಾಗೇನಹಳ್ಳಿಯ ಶ್ರೀರಾಮ್ ಸುಹಾನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅಮೃತಾ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಇದರಿಂದ ನೊಂದು ಅಮೃತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿತ್ತು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಮೈಸೂರು: ಅನಾರೋಗ್ಯದಿಂದ ಪತಿ ಸಾವು, ಆಘಾತಕ್ಕೊಳಗಾಗಿ ಪತ್ನಿ ಆತ್ಮಹತ್ಯೆ!