ಮೈಸೂರು : ಹಗಲು ಹೊತ್ತು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಅದೇ ಮನೆಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳರನ್ನು ಮೈಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲೆಯ ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲೇ 5, ಪಿರಿಯಾಪಟ್ಟಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಸೇರಿದಂತೆ, ಮೈಸೂರು ಜಿಲ್ಲೆಯಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾದ ಮೂವರು ಮನೆಗಳ್ಳರನ್ನು ಬಂಧಿಸಿದ್ದೇವೆ.
ಇದನ್ನೂ ಓದಿ : ಸೆಖೆ ತಾಳಲಾರದೆ ಮನೆ ಹೊರಗೆ ಮಲಗಿದ್ರು; ಹೊಂಚು ಹಾಕಿದ್ದ ಕಳ್ಳರು ನಗದು, ಚಿನ್ನಾಭರಣ ದೋಚಿದ್ರು
ಬಂಧಿತ ಆರೋಪಿಗಳಲ್ಲಿ ಇಬ್ಬರು ಹಾಸನ ಮೂಲದವರು, ಮತ್ತೊಬ್ಬ ಮೈಸೂರು ಜಿಲ್ಲೆಗೆ ಸೇರಿದವ. ಮನೆಗಳ್ಳರ ಬಂಧನಕ್ಕೆ ಮೈಸೂರು ಜಿಲ್ಲಾ ಅಡಿಷನಲ್ ಎಸ್‌ಪಿ. ನಂದಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದಲ್ಲಿ ಹುಣಸೂರು, ಪಿರಿಯಾಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ಗಳು ಇತರ ಸಿಬ್ಬಂದಿಗಳು ಇದ್ದರು ಎಂದು ತಿಳಿಸಿದರು. ಇದೇ ವೇಳೆ, ಬಂಧಿತರಿಂದ 289 ಗ್ರಾಂ ಅಂದರೆ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 2.4 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿರುವ ಬಗ್ಗೆ ವಿವರ ನಾಡಿದರು.
ಬೀಗ ಹಾಕಿದ ಮನೆಗಳೇ ಟಾರ್ಗೆಟ್: ಬಂಧಿತ ಮೂವರು ಹಲವು ಬಾರಿ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದರು. ಮತ್ತದೇ ಚಾಳಿ ಮುಂದುವರೆಸಿದ್ದಾರೆ. ಬೆಳಗಿನ ಸಮಯದಲ್ಲಿ ಆರೋಪಿಗಳು ಬೀಗ ಹಾಕಿದ ಮನೆಗಳ ಮುಂದೆ ಬಿದ್ದಿರುವ ದಿನಪತ್ರಿಕೆ ಹಾಗೂ ಹಾಲಿನ ಪ್ಯಾಕೆಟ್‌ಗಳ ಸುಳಿವಿನ ಮೇಲೆ ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದರು. ರಾತ್ರಿ ವೇಳೆ ಅದೇ ಮನೆಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಸೀಮಾ ಲಾಟ್ಕರ್ ತಿಳಿಸಿದರು.
ಪೊಲೀಸರಿಗೆ ತಿಳಿಸಲು ಮನವಿ: ಸಾರ್ವಜನಿಕರು ಬೀಗ ಹಾಕಿ ಬೇರೆ ಊರಿಗೆ ಹೋಗುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಸ್ಥಳೀಯ ಪೋಲಿಸರಿಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಎಸ್ಪಿ ಮನವಿ ಮಾಡಿದ್ದಾರೆ.
ಭದ್ರಾವತಿಯಲ್ಲಿ ಮನೆಗಳ್ಳರ ಬಂಧನ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನ್ಯೂ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಜೂನ್ 7ರಂದು ಬಂಧಿಸಿದ್ದರು. ಆರೋಪಿಗಳಿಂದ 39 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಕಳೆದ 10 ದಿನಗಳಿಂದೆ ಎರಡು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಗಂಜಿಕೆರೆ ಗ್ರಾಮದ ಲೋಕೇಶ್ (50) ಹಾಗೂ ರಂಗನಾಥ್ (45) ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿಯ ವಿಜಯ್ (33) ಎಂಬವರು ಸಿಕ್ಕಿಬಿದ್ದಿದ್ದರು. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ಕೃತ್ಯ ಒಪ್ಪಿಕೊಂಡಿದ್ದರು.