ಮೈಸೂರು: ಮೈಸೂರು ನಗರ ವ್ಯಾಪ್ತಿಯ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೆಲವು ಪ್ರದೇಶಗಳಿದ್ದು, ಬೆಂಗಳೂರಿನ ರೀತಿಯಲ್ಲಿ ಮೈಸೂರು ನಗರಕ್ಕೆ ನೂತನವಾಗಿ ನಾಲ್ಕು ತಹಸೀಲ್ದಾರ್ ಹುದ್ದೆಯನ್ನು ಸೃಷ್ಠಿಸುವಂತೆ ಕಂದಾಯ ಸಚಿವರಲ್ಲಿ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.
ಮೈಸೂರಿನ ಜಲದರ್ಶಿನಿಯಲ್ಲಿಂದು ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು ಭೇಟಿ ಮಾಡಿ ಮಾತನಾಡಿದ ಅವರು, ತಹಸೀಲ್ದಾರ್‌ಗೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಮೈಸೂರು ನಗರದ ಜಮೀನುಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣಗಳಿದ್ದು, ವಾರಕ್ಕೆ ಮೂರು ದಿನ ಹೈಕೋರ್ಟ್‌ಗೆ ಹೋಗುತ್ತಾರೆ. ಇದರಿಂದ ತಾಲೂಕಿನ ರೈತರಿಗೆ ಕೆಲಸ ಕಾರ್ಯಗಳಾಗದೇ ಬಹಳ ತೊಂದರೆಯಾಗುತ್ತಿದೆ. ಮೈಸೂರು ನಗರದ ನಾಲ್ಕು ಭಾಗಗಳಿಗೆ ಒಂದರಂತೆ ಹೊಸ ತಹಸೀಲ್ದಾರ್ ಹುದ್ದೆ ಸೃಷ್ಠಿಸುವಂತೆ ಅವರು ಕೋರಿದರು.
ಮೈಸೂರು ತಾಲೂಕಿನಲ್ಲಿ ರೈತರು ನೂರಾರು ವರ್ಷಗಳಿಂದ ಜಮೀನುಗಳನ್ನು ಉಳುಮೆ ಮಾಡುತ್ತಾ ಬಂದಿದ್ದಾರೆ. ನಗರ ಪ್ರದೇಶದಿಂದ 10 ಕಿ.ಮೀ ಒಳಗಿರುವ ಜಮೀನುಗಳಿಗೆ ಸಾಗುವಳಿ ನೀಡುತ್ತಿಲ್ಲ. ರೈತರ ಅನುಕೂಲಕ್ಕಾಗಿ ಉಳುಮೆ ಮಾಡುತ್ತಿರುವ ಜಮೀನಿನ ಪೈಕಿ ಅರ್ಧವನ್ನು ಸರ್ಕಾರ ವಹಿಸಿಕೊಂಡು ಬಾಕಿ ಜಮೀನನ್ನು ರೈತರಿಗೆ ಉಳುಮೆ ಮಾಡಲು ಸಕ್ರಮ ಮಾಡಿಕೊಡಬೇಕು ಎಂದರು.
ಮೈಸೂರು ನಗರ ಪ್ರದೇಶದಲ್ಲಿರುವ ಕೆರೆಗಳು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿ, ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಟಾಸ್ಕ್ ಪೋರ್ಸ್ ರಚಿಸಿ ಕೂಡಲೇ ಕೆರೆಗಳು ಮತ್ತು ರಾಜಕಾಲುವೆಗಳನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆಯೂ ಸಚಿವರಿಗೆ ಮನವರಿಕೆ ಮಾಡಿದರು.
ಪ್ರಕರಣಗಳನ್ನು 3 ತಿಂಗಳೊಳಗೆ ಇತ್ಯರ್ಥಪಡಿಸಲು ಸಚಿವರ ಸೂಚನೆ: ಆರು ತಿಂಗಳಿಂದ ಐದು ವರ್ಷದವರೆಗಿನ ಎಲ್ಲ ಪ್ರಕರಣಗಳನ್ನು ತಹಸೀಲ್ದಾರ್, ಎಸಿ ಹಾಗೂ ಡಿಸಿ ನ್ಯಾಯಾಲಯಗಳು ಮೂರು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಗಡುವು ನೀಡಿದರು.
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಪ್ರಾದೇಶಿಕ ವಿಭಾಗದ ವ್ಯಾಪ್ತಿಯ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳ ವರೆಗಿನ ಒಟ್ಟು 4,362 ತಕರಾರು ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಇದರಿಂದ ಸಂಬಂಧಿಸಿದವರು ದಿನಂಪ್ರತಿ ತಹಸೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಮುಂದಿನ 3 ತಿಂಗಳೊಳಗಾಗಿ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.
ಎಸಿ , ಡಿಸಿಗೂ ಗಡುವು: ಮೈಸೂರು ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ನ್ಯಾಯಾಲಯಗಳಲ್ಲೂ ಸಾಕಷ್ಟು ತಕರಾರು ಪ್ರಕರಣಗಳು ಬಾಕಿ ಉಳಿದಿವೆ. ಕೊಳ್ಳೆಗಾಲ 540, ಚಿಕ್ಕಮಗಳೂರು 473, ತರೀಕರೆ 952, ಮಂಗಳೂರು 3627, ಪುತ್ತೂರು 243, ಹಾಸನ 678, ಸಕಲೇಶಪುರ 189, ಮಡಿಕೇರಿ 827, ಮಂಡ್ಯ 1456, ಪಾಂಡವಪುರ 1111, ಮೈಸೂರು 1535, ಹುಣಸೂರು 751, ಮತ್ತು ಕುಂದಾಪುರದಲ್ಲಿ 2061 ಪ್ರಕರಣಗಳು ಸೇರಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟಾರೆಯಾಗಿ 14,444 ಪ್ರಕರಣಗಳು ಬಾಕಿ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಚಿಕ್ಕಮಗಳೂರು 652, ಚಾಮರಾಜನಗರ 213, ದಕ್ಷಿಣ ಕನ್ನಡ 507, ಹಾಸನ 547, ಕೊಡಗು 140, ಮಂಡ್ಯ 320, ಮೈಸೂರು 1040, ಉಡುಪಿ 130 ಪ್ರಕರಣಗಳು ಸೇರಿದಂತೆ ಒಟ್ಟಾರೆಯಾಗಿ 3,513 ಪ್ರಕರಣಗಳು ಬಾಕಿ ಇವೆ. ಪರಿಶೀಲನೆ ವೇಳೆ ಎಸಿ-ಡಿಸಿ ನ್ಯಾಯಾಲಯಗಳಲ್ಲೂ ಬಾಕಿ ಇರುವ ಪ್ರಕರಣ ಬಗ್ಗೆ ಅಸಮಾಧಾನ ಹೊರಹಾಕಿದ ಸಚಿವರು, ಉನ್ನತ ಅಧಿಕಾರಿಗಳೇ ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸದಿದ್ದರೆ, ತಹಸೀಲ್ದಾರರಿಂದ ನೀವು ಹೇಗೆ ಪರಿಣಾಮಕಾರಿ ಕೆಲಸವನ್ನು ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ನೀವು ಇತರರಿಗೆ ತಪ್ಪು ಉದಾಹರಣೆಯಾಗಬೇಡಿ ಎಂದು ಸಲಹೆ ನೀಡಿದರು.
ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳೂ ಸೇರಿದಂತೆ ಉಳಿದ 7000 ಪ್ರಕರಣಗಳನ್ನು ಮುಂದಿನ 4 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳು ಸಹ ತಮ್ಮ ನ್ಯಾಯಾಲಯದಲ್ಲಿರುವ 6 ತಿಂಗಳಿಗಿಂತ ಹಳೆಯ ಎಲ್ಲ ಪ್ರಕರಣಗಳನ್ನೂ ಮುಂದಿನ 3 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಫಲಿತಾಂಶ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಹೌಸಿಂಗ್ ಸ್ಕೀಮ್ ದುರುಪಯೋಗ ಆಗಬಾರದು: ಮಳೆ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ನಾವು ತ್ವರಿತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ನಾವು ಬೇರೆ ರಾಜ್ಯಗಳಿಗೆ ಮಾದರಿಯಾಗಿದ್ದೇವೆ. 2019 ರಿಂದ 2022ರ ಅವಧಿಯಲ್ಲಿ ಮೈಸೂರು ವಿಭಾಗದ 9 ಜಿಲ್ಲೆಗಳಲ್ಲಿ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆ ದುರಸ್ಥಿಗೂ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲಾಗಿದೆ. ಆದರೆ, ಕೆಲವರು ಈ ಯೋಜನೆಯನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳೂ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸದೇ ಸರ್ಕಾರವನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ಮಳೆಯಿಂದ ಮನೆ ರಿಪೇರಿಗೆ ಸರ್ಕಾರ 50,000 ರೂ ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ 1.3 ಲಕ್ಷ ಹಾಗೂ ಮನೆ ಮರು ನಿರ್ಮಾಣಕ್ಕೆ 3.7 ಲಕ್ಷ ರೂ. ಸೇರಿ ಒಟ್ಟಾರೆ 5 ಲಕ್ಷ ರೂ. ನೀಡುತ್ತೇವೆ. ಆದರೆ, ಕೆಲವು ಫಲಾನುಭವಿಗಳು ಮನೆಯನ್ನು ಕಟ್ಟಿಲ್ಲ. 2018-19ರಲ್ಲಿ ಫಲಾನುಭವಿಗಳಿಗೆ ಮನೆ ರಿಪೇರಿಗೆ ಹಣ ನೀಡಲಾಗಿದೆ. ಆದರೆ, ಹಣ ಪಡೆದವರು ಇನ್ನೂ ಮನೆ ರಿಪೇರಿ ಮಾಡಿದ ದಾಖಲೆಯೇ ಇಲ್ಲ. ಐದು ವರ್ಷಗಳಿಂದ ಫಲಾನುಭವಿಗಳು ರಿಪೇರಿ ಮಾಡದ ಮನೆಯಲ್ಲೇ ಇದ್ದಾರೆ? ಇದು ಹೇಗೆ ಸಾಧ್ಯ ? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಚಿವರು, ಜಿಲ್ಲಾಧಿಕಾರಿಗಳು ಇನ್ನಾದರೂ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಮುನ್ನ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಆಗಸ್ಟ್ 15ರಿಂದ ಇ-ಆಫೀಸ್: ನವೀನ ತಂತ್ರಜ್ಞಾನ ಬಳಸಿಕೊಂಡು ಆಡಳಿತಕ್ಕೆ ವೇಗ ನೀಡಲು, ಕಡಿತ ವಿಲೇವಾರಿ ತ್ವರಿತಗೊಳಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಅಗತ್ಯವಿದೆ. ಆಗಸ್ಟ್ 15 ರಿಂದ ಜಿಲ್ಲಾಧಿಕಾರಿಗಳು ಇ-ಆಫೀಸ್ ಮೂಲಕ ಕೇಂದ್ರ ಕಚೇರಿಯೊಂದಿಗೆ ವ್ಯವಹರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದನ್ನೂಓದಿ: ಪಕ್ಷ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ: ಶಾಸಕ ಜಿ.ಟಿ.ದೇವೇಗೌಡ