ಮೈಸೂರು: ಪ್ರವಾಸೋದ್ಯಮ ಈಗ ತಾನೇ ಚೇತರಿಕೆ ಕಾಣುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕೋವಿಡ್ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ಸರ್ಕಾರಿ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹೆಚ್ಚಾದರೆ ಮುಚ್ಚಿರುವ ಕೋವಿಡ್ ಕೇರ್ ಸೆಂಟರ್ಗಳನ್ನು ಮತ್ತೆ ತೆರೆಯಲಾಗುವುದು. ಈಗಾಗಲೇ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸುವಂತೆ ತಿಳಿಸಲಾಗಿದೆ ಎಂದರು.
ನಿರ್ಗತಿಕ ವಸತಿ ಗೃಹದಲ್ಲಿ ವಾಸವಿರುವ ವೃದ್ದರಿಗೆ ಯಾವುದೇ ಗುರುತಿನ ಚೀಟಿ ಇಲ್ಲದಿದ್ದರೂ ಎಲ್ಲಾರಿಗೂ ಪಾಲಿಕೆ ವತಿಯಿಂದ ಉಚಿತ ವಾಹನದಲ್ಲಿ ಕರೆದುಕೊಂಡು ಹೋಗಿ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಪಾಲಿಕೆ ಈಗಾಗಲೇ ಈ ಕೆಲಸ ಮಾಡುತ್ತಿದೆ.
ಕೋವಿಡ್ ಹೆಚ್ಚಾಗುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಬರುವ ಪ್ರವಾಸಿಗರು RT-PCR ಕೋವಿಡ್ ವರದಿ ತರಬೇಕು. ಜೊತೆಗೆ ನಂಜನಗೂಡಿನ ರಥೋತ್ಸವ ಸರ್ಕಾರಿ ಗೈಡ್-ಲೈನ್ಸ್ ಪ್ರಕಾರ ನಡೆಯುತ್ತದೆ ಎಂದು ಇದೇ ವೇಳೆ ತಿಳಿಸಿದರು.