ಮೈಸೂರು: ಸಾಲಬಾಧೆ ಹಿನ್ನೆಲೆಯಲ್ಲಿ ತೋಟದ ಮನೆಯಲ್ಲಿ ವಾಸವಿದ್ದ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕೆ.ಆರ್ ನಗರ ತಾಲೂಕಿನ ಸಂಬರವಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಬಳಿಯ ಸಂಬರವಳ್ಳಿ ಎಂಬ ಗ್ರಾಮದ ತೋಟವೊಂದರಲ್ಲಿ ಬೆಟ್ಟಪ್ಪ(50), ಹೆಂಡತಿ ರುಕ್ಮಿಣಿ (40) ಮೃತರು. ಈ ದಂಪತಿ ಗ್ರಾಮದ ಸಮೀಪದಲ್ಲಿದ್ದ ಗುಲ್ ಮಹಮದ್ ಶಾಹಿದ್ ಎಂಬುವವರ ತೋಟವನ್ನು ಕಳೆದ 20 ವರ್ಷಗಳಿಂದ ನೋಡಿಕೊಂಡು, ತೋಟದಲ್ಲೇ ಮನೆ ಮಾಡಿಕೊಂಡು ವಾಸವಿದ್ದರು.
ಮಂಗಳವಾರ ರಾತ್ರಿ ದಂಪತಿ ಊಟ ಮುಗಿಸಿ, ತೋಟದ ಮನೆಗೆ ಗ್ರಾಮದಿಂದ ಹೋಗಿದ್ದು, ಬುಧವಾರ ಬೆಳಗ್ಗೆ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎಂದಿನಂತೆ ನಿನ್ನೆ ತೋಟಕ್ಕೆ ಬಂದ ಮಾಲೀಕ ಗುಲ್ ಮಹಮದ್ ಶಾಹಿದ್ ಮನೆಯಿಂದ ಫೋನ್ ಮಾಡಿದ್ದರು. ಆಗ ಕರೆಗೆ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ತೋಟದ ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಎಲ್ಲೂ ದಂಪತಿ ಕಾಣಲಿಲ್ಲ.
ಆದರೇ, ತೋಟದಲ್ಲಿದ್ದ ತೆರೆದ ಬಾವಿಯಲ್ಲಿ ಇಬ್ಬರ ಮೃತದೇಹಗಳು ಕಂಡುಬಂದಿದ್ದು, ತಕ್ಷಣ ಮಹಮದ್ ಅವರು ಪೊಲೀಸರಿಗೆ ಕರೆ ಮಾಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ತಮ್ಮ ಕುಟುಂಬ ನಿರ್ವಹಣೆಗಾಗಿ ಮೀಟರ್ ಬಡ್ಡಿ ಲೆಕ್ಕದಲ್ಲಿ 5 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದರು ಎಂದು ತೋಟದ ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಚಾರದಲ್ಲಿ ಸಾಲ ತೀರಿಸಲು ಕಷ್ಟ ಎಂದು ಬೆಟ್ಟಪ್ಪ ಮತ್ತು ಅವರ ಪತ್ನಿ ಚಿಂತೆ ಮಾಡುತ್ತಿದ್ದರು. ಇದರಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: 45ರ ವ್ಯಕ್ತಿ ಜೊತೆ 12ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮಾಂಕುರ: ಮರದಲ್ಲಿ ಇಬ್ಬರ ಶವ ಪತ್ತೆ!