ಮೈಸೂರು: ನಗರದ ಎನ್.ಆರ್. ಕ್ಷೇತ್ರದಲ್ಲಿ ಕೊರೊನಾ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಲ್ಲಿ ಲಾಕ್ ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಎನ್.ಆರ್. ಕ್ಷೇತ್ರದ ಕೆಲವು ಭಾಗಗಳನ್ನು ಜಿಲ್ಲಾಡಳಿತ ಮಿನಿ ಲಾಕ್ ಡೌನ್ ಮಾಡಿತ್ತು. ಇದನ್ನು ಹಾಗೆಯೇ ಮುಂದುವರೆಸಲಾಗಿದೆ. ಎನ್.ಆರ್. ಕ್ಷೇತ್ರದಲ್ಲಿ ಜನರು ಅನಗತ್ಯವಾಗಿ ಓಡಾಟ ನಡೆಸಬಾರದು. ಜಿಲ್ಲಾಡಳಿತದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಇದುವರೆಗೆ 550 ಕ್ಕೂ ಹೆಚ್ಚು ಆ್ಯಂಟಿಜನ್ ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಲಾಗಿದ್ದು,115 ಪಾಸಿಟಿವ್ ಬಂದಿದೆ. ಇದರಿಂದ ಸ್ವಲ್ಪ ಜನರ ಪ್ರಾಣ ಉಳಿಸಿದಂತೆ ಆಗಿದೆ. ಈ ರೀತಿ ಗ್ರಾಮೀಣ ಭಾಗದಲ್ಲೂ ಟೆಸ್ಟ್ ಮಾಡುವ ಅವಶ್ಯಕತೆ ಇದೆ. ಆದ್ದರಿಂದ 10 ಸಾವಿರ ಕಿಟ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇದರಿಂದ ಅತಿ ಶೀಘ್ರವಾಗಿ ಪಾಸಿಟಿವ್ ಪ್ರಕರಣಗಳನ್ನು ಗುರುತಿಸಬಹುದು ಹಾಗೂ ಸೂಕ್ತ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜೆ.ಕೆ. ಟೈರ್ಸ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಕಾರ್ಖಾನೆಯವರಿಗೆ ನಿರ್ದೇಶನ ನೀಡಿದ್ದೇವೆ. ಅವರಿಗೆ ಇಂಡಸ್ಟ್ರೀಸ್ ಮೆಡಿಕಲ್ ವಿಮೆ ಇರುತ್ತದೆ. ಆದ್ದರಿಂದ ಅವರೇ ಕೋವಿಡ್ ಕೇರ್ ಸೆಂಟರ್ ತೆರೆದು ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದೇವೆ. ಸರ್ಕಾರ ಎಲ್ಲವನ್ನೂ ಮಾಡಲು ಆಗುವುದಿಲ್ಲ, ಖಾಸಗಿ ಆಸ್ಪತ್ರೆಯವರ ಜೊತೆ ಟೈಅಪ್ ಮಾಡಿಕೊಂಡು ಟೆಸ್ಟ್ ಮಾಡಿಸಲಾಗುತ್ತಿದೆ. ಅದರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ತಿಳಿಸಿದರು.