ಮೈಸೂರು : ದಸರಾ ನಂತರ ಕೊರೊನಾ ಸೋಂಕು ಉಲ್ಬಣಗೊಂಡ್ರೆ ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರ ಹೊಣೆ ಹೊತ್ತು ಕೊಳ್ಳುತ್ತದೆಯೇ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸರಳ ದಸರಾ ಆಚರಣೆ ಎಂದು ಹೇಳಿದ ಸರ್ಕಾರ, ಅರಮನೆ ಆವರಣದಲ್ಲಿ ಎರಡು ಸಾವಿರ ಜನರಿಗೆ ಅವಕಾಶ ನೀಡುವುದಾಗಿ ಹೇಳುತ್ತಿದೆ.
ಎರಡು ಸಾವಿರ ಜನರ ಜೊತೆಗೆ, ಪೊಲೀಸರು ಸಾವಿರ, ರಾಜಕಾರಣಿಗಳ ಕಡೆಯವರು ಒಂದು ಸಾವಿರ, ಜೊತೆಗೆ ನೂರಾರು ಪತ್ರಕರ್ತರು ಇರುತ್ತಾರೆ. ದಸರಾ ಆಚರಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಏನಾಯಿತು ಎಂದು ಕೇಳಿದರು.
ಹತ್ತು ಸಾವಿರ ಜನ ಸೇರಿ ದಸರಾ ಆಚರಿಸಿದ್ರೆ ಕೊರೊನಾ ಮತ್ತಷ್ಟು ಹೆಚ್ಚಾಗಲಿದೆ. ಇಡೀ ರಾಜ್ಯಾದ್ಯಂತ ಕೊರೊನಾ ಸೋಂಕು ಹರಡಲಿದೆ. ದಸರಾ ಆಚರಣೆಯಿಂದ ಅನಾನುಕೂಲಗಳೇ ಹೆಚ್ಚು. ಇಷ್ಟೊಂದು ಜನರನ್ನು ಸೇರಿಸಿ ದಸರಾ ಮಾಡಲು ಕೇಂದ್ರದಿಂದ ಅನುಮತಿ ಪಡೆದಿದ್ದೀರಾ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಜನರನ್ನು ಮುಟ್ಠಾಳರನ್ನಾಗಿಸುತ್ತಿದೆ. ಇದು ದೇಶದ ಹಾಗೂ ಜನರ ದೌರ್ಭಾಗ್ಯ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಏಕೆ ಮಾತನಾಡುತ್ತಿಲ್ಲ. ಶಾಸಕ ರಾಮದಾಸ್ ದಸರಾ ಆಚರಣೆ ಮಾಡಿದ್ರೆ ಜನರು ಹೊರ ಬಂದು ರಿಲ್ಯಾಕ್ಸ್ ಆಗುತ್ತಾರೆಂದು ಹೇಳುತ್ತಿದ್ದಾರೆ. ಇದೇ ರಾಮದಾಸ್ ಅವರು ಈ ಮೊದಲು ದೀಪ ಹಚ್ಚಿದ್ರೆ ಕೊರೊನಾ ನಾಶವಾಗುತ್ತೆ ಎಂದಿದ್ದರು. ಗೈಡ್‌ಲೈನ್ಸ್ ಪ್ರಕಾರ ದಸರಾ ನಡೆಸಲು ನಿಮಗೆ ಸಾಧ್ಯವೇ ಎಂದು ಟೀಕಿಸಿದರು.
ಮಹಿಷ ದಸರಾ ಆಚರಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅದು ಆಯೋಜಕರ ವೈಯಕ್ತಿಕ ವಿಚಾರ. ಮಹಿಷ ದಸರಾ ಆಚರಣೆ ಮಾಡಿದ್ರೆ ತಪ್ಪಿಲ್ಲ. ಪ್ರತಿಯೊಬ್ಬರೂ ತಮ್ಮ ನಂಬಿಕೆಗೆ ಅನುಸಾರ ಆಚರಣೆಗಳನ್ನು ಮಾಡಬಹುದಾಗಿದೆ ಎಂದರು. ಮೈಸೂರಿನ ಪ್ರತಿಷ್ಠಿತ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ದುರಂತ. ಇದೀಗ ಮುಡಾದಲ್ಲಿ ರಾತ್ರಿ ಒಂಬತ್ತು, ಹತ್ತು ಗಂಟೆಯಾದ್ರೂ ಕಚೇರಿಗಳು ತೆರೆದಿರುತ್ತವೆ. ಸಂಜೆಯ ಬಳಿಕ ಬಿಜೆಪಿಯವರಿಗೆ ಮಾತ್ರ ಒಳ ಬಿಡಲಾಗುತ್ತಿದೆ ಎಂದು ಆರೋಪಿಸಿದರು.