ಮೈಸೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನ ಬಂಧಿಸಿ ಬಿಡುಗಡೆ ಮಾಡಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮ ಖಂಡಿಸಿ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯಿಂದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ತುಂಡುಭೂಮಿ ವಿಚಾರಕ್ಕೆ ಬುಧವಾರ ಗುಂಡಿನ ದಾಳಿ ನಡೆದು 10 ಮಂದಿ ಮೃತಪಟ್ಟಿದ್ದರು. ಸಾವನ್ನಪ್ಪಿದ ಉತ್ತರಪ್ರದೇಶದ ಸೋನಾಭದ್ರ ಬುಡುಕಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಪ್ರಿಯಾಂಕ ಗಾಂಧಿಯನ್ನು ತಡೆದು ಉತ್ತರಪ್ರದೇಶ ಸರ್ಕಾರ ಅವಮಾನ ಮಾಡಿದೆ ಎಂದು ಮೈಸೂರಿನ ಕಾಂಗ್ರೆಸ್ ಸಮಿತಿ ವತಿಯಿಂದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಹೋರಾಟ ಮನೋಭಾವನೆಯನ್ನು ಸರ್ಕಾರಿ ಯಂತ್ರದ ಮೂಲಕ ದುರುಪಯೋಗ ಮಾಡುತ್ತಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ತೊಘಲಕ್ ದರ್ಬಾರ್ ನಡೆಸುತ್ತ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರುತ್ತಿದ್ದಾರೆಂದು ಕಿಡಿಕಾಡಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಿಯಾಂಕ ಗಾಂಧಿಯೊಂದಿಗಿನ ಈ ವರ್ತನೆ ಯೋಗ್ಯವಲ್ಲ, ಬಿಜೆಪಿ ನಡೆ ಸರಿಯಿಲ್ಲವೆಂದು ಹರಿಹಾಯ್ದರು.