ಮೈಸೂರು: ಕಾಂಗ್ರೆಸ್ನವರು ನಮ್ಮನ್ನ ವಿರೋಧಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಚಡ್ಡಿ ಸುಡುವಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅವರಿಗೆ ಅವರೇ ಗುಂಡಿ ತೋಡಿಕೊಳ್ಳುತ್ತಿದ್ದಾರೆ. ಅವರನ್ನ ಅವರೇ ಇನ್ನೂ, ಕೆಟ್ಟ ಪರಿಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ಅವರ ಪ್ರಯತ್ನ ಅವರಿಗೆ ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ನ ಈ ನಡೆ ಜನ ಒಪ್ಪುವಂತಹದ್ದಲ್ಲ, ಆರ್ಎಸ್ಎಸ್ ದೇಶದ ಉನ್ನತಿಗಾಗಿ ಕೆಲಸ ಮಾಡುತ್ತಿರುವ ಸಂಘಟನೆ. ಕಾಂಗ್ರೆಸ್ನವರ ಹೋರಾಟಗಳಿಗೆ ಯಾವುದೇ ಫಲ ಹಾಗೂ ಮಾನ್ಯತೆ ಇಲ್ಲ. ಕಾಂಗ್ರೆಸ್ನವರ ಸಂಸ್ಕೃತಿ, ಊಟ, ನಿದ್ದೆ ಎಲ್ಲದರಲ್ಲಿಯೂ ಭ್ರಷ್ಟಾಚಾರ ತುಂಬಿಕೊಂಡಿದೆ. ಅವರು ಯಾವ ನೈತಿಕತೆಯಿಂದ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಅವರಿಗೆ ಕಾಣುತ್ತಿದೆ ಎಂದಿದ್ದಾರೆ.
ಪಿಎಸ್ಐ ವಿಚಾರದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಈ ರೀತಿ ಇಂತಹ ವ್ಯಕ್ತಿಗಳಿಂದ ಅಕ್ರಮ ಆಗಿದೆ ಎಂಬುದನ್ನ ತಿಳಿಸಿದಾಗ ತಕ್ಷಣ ನಮ್ಮ ಗೃಹಸಚಿವರು ಈ ನಿಟ್ಟಿನಲ್ಲಿ ಕ್ರಮವಹಿಸಿ ತನಿಖೆ ಮಾಡಲು ಪ್ರಾರಂಭಿಸಿದರು. ಆದರೆ, ಕಾಂಗ್ರೆಸ್ನಲ್ಲಿ ಇದರ ಬಗ್ಗೆ ಮಾತನಾಡಿದರೆ ಎಲ್ಲಿ ನಮ್ಮ ಹಗರಣಗಳು ಆಚೆ ಬರುತ್ತದೆಯೋ ಎಂಬ ಭಯದಲ್ಲಿ ಇಂತಹ ವಿಚಾರವನ್ನ ಅವರು ಯಾವತ್ತೂ ರೈಸ್ ಮಾಡಿಲ್ಲ. ಈಗ ಮಾತನಾಡುತ್ತಿರುವ ಇವರು ಆಗ ಕಡುಬು ತಿಂತಾಯಿದ್ದರಾ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್-ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದರಾಮಯ್ಯಗೆ ಇರುವ ಗೌರವವೂ ಹಾಳಾಗುತ್ತೆ: ಬಿಎಸ್ವೈ