ಮೈಸೂರು: ಲಾಕ್ಡೌನ್ ಇದ್ದರೂ ನಂಜುಂಡೇಶ್ವರನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ನಗರ ಹಾಗೂ ಗ್ರಾಮಾಂತರ ಘಟಕ ದೂರು ನೀಡಿದೆ.
ಮೇ 18 ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ತಮ್ಮ ಕುಟುಂಬ ಸಮೇತ ಹಾಗೂ ತನ್ನ ಹತ್ತಾರು ಸಹಚರರ ಜೊತೆಗೂಡಿ ಪೊಲೀಸ್ ರಕ್ಷಣೆಯೊಂದಿಗೆ ನಂಜನಗೂಡು ತಾಲೂಕಿನ ಮಹಾದೇವ ತಾತ ಐಕ್ಯ ಸ್ಥಳ ಹಾಗೂ ಸರ್ಕಾರಿ ಮುಜರಾಯಿ ಇಲಾಖೆಗೆ ಒಳಪಡುವ ಐತಿಹಾಸಿಕ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಹವನಗಳನ್ನು ನಡೆಸಿರುತ್ತಾರೆ.
ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್ -2005, ಸೆಕ್ಷನ್ 51 ಸ್ಪಷ್ಟ ಉಲ್ಲಂಘನೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020 ರ ಉಲ್ಲಂಘನೆ,ಸರ್ಕಾರದ ಅಧಿಕಾರಿಗಳು ಹೊರಡಿಸುವ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು IPC 188, ಸ್ಪಷ್ಟ ಉಲ್ಲಂಘನೆ,ಇಲ್ಲಿ ಸೂಚಿಸಿರುವ ಎಲ್ಲ ಕಾನೂನುಗಳು ಮುಖ್ಯಮಂತ್ರಿ ಮಗನಿಂದಲೇ ಉಲ್ಲಂಘನೆ ಆಗಿರುವುದರಿಂದ ಬಿ ವೈ ವಿಜಯೇಂದ್ರ ಅವರ ವಿರುದ್ಧ FIR ದಾಖಲಿಸಲು ಸಂಬಂಧಿಸಿದ ಪೊಲೀಸ್ ಇಲಾಖೆಗೆ ತಾವು ಸೂಚನೆ ನೀಡಬೇಕೆಂದು ಕೋರಿದೆ.
ಹಾಗೆಯೇ ಇದಕ್ಕೆ ಸಹಕಾರ ನೀಡಿದ ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸರ್ಕಾರಿ ಸಿಬ್ಬಂದಿ/ ಪುರೋಹಿತ ವರ್ಗ ಇವರುಗಳನ್ನು ಕೂಡಲೇ ಅಮಾನತು ಮಾಡಿ, ಇವರುಗಳ ವಿರುದ್ಧ ಸಹ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಜಂಟಿಯಾಗಿ ಈ ದೂರು ನೀಡಿದ್ದಾರೆ.