ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಮೊದಲನೇ ಪ್ರಾಶಸ್ತ್ಯ ಹಾಗೂ ಎರಡನೇ ಪ್ರಾಶಸ್ತ್ಯ ಮತದಲ್ಲಿ ಅತಿ ಹೆಚ್ಚು ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ.
ನಿನ್ನೆ ಬೆಳಗ್ಗೆಯಿಂದ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಆರಂಭವಾದಾಗ ಪಕ್ಷೇತರ ಅಭ್ಯರ್ಥಿಗಳಾದ ಎನ್.ಎಸ್ ವಿನಯ್ ಹಾಗೂ ಪ್ರಸನ್ನ ಎನ್. ಗೌಡ ಅವರನ್ನು ಎಲಿಮಿನೇಟ್ ಮಾಡಲಾಯಿತು. ಮತ್ತೆ ಮತ ಎಣಿಕೆ ಆರಂಭಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, ಆನಂತರ ಜೆಡಿಎಸ್ ಅಭ್ಯರ್ಥಿ ರಾಮು ಅವರನ್ನು ಎಲಿಮಿನೇಟ್ ಮಾಡಲಾಯಿತು.
2ನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಿದಾಗ ಗೆಲ್ಲಲು ಬೇಕಾದ ನಿಗದಿತ ಮತಗಳನ್ನು ಬಿಜೆಪಿ ರೀಚ್ ಆಗಿಲ್ಲ. ಇದರಿಂದ ಚುನಾವಣಾಧಿಕಾರಿಗಳು ಚುನಾವಣಾ ಆಯೋಗವನ್ನು ಸಂಪರ್ಕಿಸಿದಾಗ ಗೆಲ್ಲಲು ಬೇಕಾದ ನಿಗದಿತ ಮತಗಳನ್ನು ಪಡೆಯದ ಬಿಜೆಪಿ ಅಭ್ಯರ್ಥಿಯನ್ನೇ ಎಲಿಮಿನೇಷನ್ ಮಾಡಿ ಎಣಿಕೆ ಮಾಡುವಂತೆ ತಿಳಿಸಿದ್ದು, ಇದರಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಕೇಂದ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಹೊರಬಂದು ವಿಜಯೋತ್ಸವ ಆಚರಿಸಿದರೆ, ಬಿಜೆಪಿ ಅಭ್ಯರ್ಥಿ ಹಾಗೂ ಏಜೆಂಟರುಗಳು ಮತ ಎಣಿಕಾ ಕೇಂದ್ರದಿಂದ ಹೊರ ನಡೆದರು.
ಇದನ್ನೂ ಓದಿ: 24 ಗಂಟೆಯಾದರೂ ಮುಗಿಯದ ಮತ ಎಣಿಕೆ: ಕೈ ಅಭ್ಯರ್ಥಿ ಮುನ್ನಡೆ, ಪಕ್ಷೇತರ ಅಭ್ಯರ್ಥಿ ಎಲಿಮಿನೇಟ್
ಕಾಂಗ್ರೆಸ್ ಅಭ್ಯರ್ಥಿ ವಿಜಯೋತ್ಸವ: ಅಧಿಕೃತವಾಗಿ ಕಾಂಗ್ರೆಸ್ ವಿಜಯದ ಬಗ್ಗೆ ಚುನಾವಣಾಧಿಕಾರಿಗಳು ಘೋಷಣೆ ಮಾಡದಿದ್ದರೂ ಅತಿ ಹೆಚ್ಚು ಮತಗಳನ್ನು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಮತ ಎಣಿಕೆ ಕೇಂದ್ರದ ಮುಂದೆ ವಿಜಯದ ಸಂಕೇತವನ್ನು ತೋರಿಸಿ, ನನ್ನ ಈ ಗೆಲುವನ್ನು ನನ್ನ ತಂದೆ ದಿವಂಗತ ಜಿ. ಮಾದೇಗೌಡರಿಗೆ ಅರ್ಪಿಸುತ್ತೇನೆ. ಮತದಾರರು ಬಿಜೆಪಿ ದುರಾಡಳಿತದ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಬಲಿಸಲು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಎಲ್ಲ ಮತದಾರರಿಗೂ, ಎಲ್ಲ ನಾಯಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ತಿಳಿಸಿದರು.