ಮೈಸೂರು: ದೆಹಲಿ ಮಟ್ಟದಲ್ಲಿ ನನಗಿರುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಬರುತ್ತದೆ ಅಂತಾ ನಾನು ಹೇಳಿಲ್ಲ, ಸಿಎಂ ಬದಲಾಗುತ್ತಾರೆ ಅನ್ನೋದನ್ನು ಮಾತ್ರ ಹೇಳಬಲ್ಲೆ. ನನಗಿರುವ ಮಾಹಿತಿಯ ಪ್ರಕಾರ ಸಿಎಂ ಯಡಿಯೂರಪ್ಪ ಕುರಿತು ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ. ಈ ಬಗ್ಗೆ ಅವರ ಪಕ್ಷದ ಮುಖಂಡರಿಗೂ ಗೊತ್ತಿದೆ ಎಂದು ಹೊಸ ಬಾಂಬ್ ಹಾಕಿದರು.
ಶಿರಾ ಮತ್ತು ಆರ್.ಆರ್.ನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಶಿರಾದಲ್ಲಿ ಹೋದಬಾರಿ ಅಪಪ್ರಚಾರ ಆಯ್ತು. ಹಾಗಾಗಿ, ನಮ್ಮ ಅಭ್ಯರ್ಥಿ ಸೋತರು. ಈ ಬಾರಿ ಸರ್ಕಾರದ ದುರಾಡಳಿತ ನೋಡಿ ನಮಗೆ ಒಲವು ಇದೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ. ಬಿಜೆಪಿಗರು ದುಡ್ಡಿನಿಂದ ಈ ಚುನಾವಣೆ ಗೆಲ್ಲುತ್ತೇವೆ ಎಂದು ಅಂದುಕೊಂಡಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಇವಿಎಂ ಬಗ್ಗೆ ಇದ್ದ ಅಸಮಾಧಾನ ಹೊರಹಾಕಿದರು.
ಲವ್ ಜಿಹಾದ್ ಬಗ್ಗೆ ಪ್ರತ್ಯೇಕ ಕಾನೂನು:
ಲವ್ ಜಿಹಾದ್ ಬಗ್ಗೆ ಪ್ರತ್ಯೇಕ ಕಾನೂನು ತರುತ್ತೇವೆ ಎಂದು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಯಾರನ್ನು ಬೇಕಾದರೂ ಮದುವೆಯಾಗಬಹುದು. ಮದುವೆಗೋಸ್ಕರ ಮತಾಂತರ ಆಗುತ್ತಾರೆ ಎಂದು ತಿಳಿದುಕೊಂಡು ಬಿಜೆಪಿ ಅದಕ್ಕೋಸ್ಕರ ಕಾನೂನನ್ನು ಬದಲಾವಣೆ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಶಾಲೆ ಆರಂಭ ಬೇಡ:
ನನ್ನ ವೈಯಕ್ತಿಕ ಅಭಿಪ್ರಾಯದಂತೆ ಈ ವರ್ಷ ಶಾಲೆ ಆರಂಭ ಮಾಡುವುದು ಬೇಡ. ಪರೀಕ್ಷೆಯನ್ನು ಪಾಸ್ ಮಾಡಿ ಸಂಪೂರ್ಣವಾಗಿ ಕೊರೊನಾ ಕೊನೆಯಾದ ಮೇಲೆ ಶಾಲೆ ಆರಂಭಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದರು. ಅಮೆರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪ್ರಭಾವ ಏನು ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.