ಮೈಸೂರು: ಬಿಜೆಪಿಯಲ್ಲಿ ಮುಂದೆ ಏನಾಗುತ್ತದೆ ಎಂಬುದನ್ನು ಸ್ವಲ್ಪ ದಿನ ಕಾದು ನೋಡಿ. ಅಸಮಾಧಾನ ಹೇಗೆ ಸ್ಫೋಟವಾಗುತ್ತದೆ ಎಂಬುದು ನಿಮಗೆಯೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಿನ್ನೆಯ ಸಭೆಯಿಂದ ಯತ್ನಾಳ್, ಬೆಲ್ಲದ್, ಜಾರಕಿಹೊಳಿ ಏಕೆ ಎದ್ದು ಹೋದರು? ಯಡಿಯೂರಪ್ಪ ಅವರ ಮಗನನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಹಾಗೂ ಆರ್. ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡಿರುವುದು ಅವರಿಗೆ ಇಷ್ಟವಿಲ್ಲ. ಈ ಅಸಮಾಧಾನ ಮುಂದೆ ಸ್ಫೋಟಗೊಳ್ಳಬಹುದು. ವೇಟ್ ಅಂಡ್ ಸೀ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಈಗ ಪುನಃ ಚುನಾವಣೆ ನಡೆದರೆ ಬಿಜೆಪಿಯೇ ಗೆಲ್ಲಲಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ರಾಜ್ಯದಲ್ಲಿ ಈಗೇಕೆ ಚುನಾವಣೆ ನಡೆಯುತ್ತದೆ? ನಾವೇ ಅಧಿಕಾರಕ್ಕೆ ಬರುತ್ತೇವೆಂದು ಹಿಂದೆಯೇ ನಾನು ಹೇಳುತ್ತಿದ್ದೆ. ಅದೇ ರೀತಿ ಅಧಿಕಾರಕ್ಕೆ ಬಂದಿದ್ದೇವೆ. ಈಗ ಚುನಾವಣೆಯ ಮಾತು ಏಕೆ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಗೆ ನೈತಿಕತೆ ಇಲ್ಲ: ಕುಮಾರಸ್ವಾಮಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದು, ದಂಡ ಕಟ್ಟಿದ್ದು ಸತ್ಯ ಅಲ್ಲವೇ? ಅದನ್ನು ಕುಮಾರಸ್ವಾಮಿಯೇ ಒಪ್ಪಿಕೊಂಡಿರುವುದು ಸತ್ಯ ಅಲ್ಲವೇ? ಇಂತವರಿಂದ ನಾನು ಏನು ಹೇಳಿಸಿಕೊಳ್ಳಲಿ? ಪದೇ ಪದೇ ಕುಮಾರಸ್ವಾಮಿ ವಿಚಾರದಲ್ಲಿ ಪ್ರತಿಕ್ರಿಯೆ ಕೊಡಲು ಇಷ್ಟವಿಲ್ಲ. ಹತಾಶರಾಗಿ ಕುಮಾರಸ್ವಾಮಿ ಏನೇನೋ ಹೇಳುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.
ಪ್ರತಿಪಕ್ಷದ ನಾಯಕನಾಗಿ ಆಶೋಕ್ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ಪ್ರತಿಪಕ್ಷದ ನಾಯಕರಾದರೇ ನಾನೇನು ಮಾಡಲಿ? ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಜನರಿಗೆ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಬೇಕು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ದ್ವೇಷದ ರಾಜಕಾರಣವನ್ನು ನಿಲ್ಲಿಸಬೇಕು. ಇವು ನಮ್ಮ ಆಶಯ ಎಂದರು.
ಅಸೆಂಬ್ಲಿಯಲ್ಲಿ ಉತ್ತರ ನೀಡುತ್ತೇನೆ: ರಾಜ್ಯದಲ್ಲಿ ಟ್ರಾನ್ಸ್ಫರ್ ದಂಧೆ ವಿಚಾರದಲ್ಲಿ ಅವರು ಹೇಳಿದ್ದನ್ನೆಲ್ಲ ನಾವು ಕೇಳಬೇಕು ಅಂತ ಏನು ಇಲ್ಲ. ಅಸೆಂಬ್ಲಿಯಲ್ಲೇ ಇದಕ್ಕೆಲ್ಲ ಉತ್ತರ ನೀಡಬೇಕು, ಅಲ್ಲೇ ಉತ್ತರ ನೀಡುತ್ತೇನೆ. ವಿಡಿಯೋದಲ್ಲಿ ಮಾತನಾಡಿರುವ ವಿವೇಕಾನಂದ ಎಂಬ ವ್ಯಕ್ತಿ ಮೈಸೂರು ತಾಲೂಕಿನ ಬಿಇಒ. ಇವರ ಬಗ್ಗೆ ಮಾತನಾಡಿರುವುದು. ಆದರೆ, ವರ್ಗಾವಣೆ ಆಗಿರುವ ವಿವೇಕಾನಂದ ಎಂಬ ಇನ್ಸ್ಪೆಕ್ಟರ್ ವ್ಯಾಪ್ತಿ ಚಾಮರಾಜ ಕ್ಷೇತ್ರಕ್ಕೆ ಬರುತ್ತದೆ. ಈ ವಿಚಾರದಲ್ಲಿ ಚಾಮರಾಜ ಕ್ಷೇತ್ರದ ಶಾಸಕರನ್ನು ಕೇಳಿ ಎಂದರು.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಚಳವಳಿಯ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಜನರು ಅವರಿಗೆ ಪಾಠ ಕಲಿಸಿದ್ದಾರೆ. ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಿ ಎಂದು ಕಳಿಸಿದ್ದಾರೆ. ಇವರಿಗೆ ನಾವಿಬ್ಬರು ಜೊತೆಯಲ್ಲಿ ಅಧಿಕಾರಕ್ಕೆ ಬಂದು ಸಮ್ಮಿಶ್ರ ಸರ್ಕಾರ ಮಾಡುವ ಬಗ್ಗೆ ಚಿಂತನೆಯಲ್ಲಿದ್ದರು. ಆದರೆ, ಸದ್ಯಕ್ಕೆ ಅಧಿಕಾರಕ್ಕೆ ಬರದಿರುವುದರಿಂದ ಹತಾಶರಾಗಿದ್ದಾರೆ. ಇದರಿಂದಲೇ ಕುಮಾರಸ್ವಾಮಿ ಹೊಟ್ಟೆ ಉರಿ, ದ್ವೇಷ, ಅಸೂಯೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರು ಗೆದ್ದಿರುವುದು 19 ಸ್ಥಾನ, ಅವರ ಪಂಚರತ್ನಗಳು ಏನಾದವು? 37 ರಿಂದ 19ಕ್ಕೆ ಕುಸಿತ ಕಂಡಿರುವುದರಿಂದ ಕುಮಾರಸ್ವಾಮಿ ಹತಾಶಾರಾಗಿದ್ದರೆ. ಅವರು ಆರಂಭದಲ್ಲೇ ಪೆನ್ಡ್ರೈವ್ ಇದೆ ಎಂದು ಹೇಳುತ್ತಿದ್ದರು. ಮೊದಲು ಅದನ್ನು ತೋರಿಸಲಿ. ಅಸೆಂಬ್ಲಿಯಲ್ಲಿ ಏಕೆ ತೋರಿಸಲಿಲ್ಲ? ಯಾರೋ ತೋರಿಸಬೇಡಿ ಎಂದರಂತೆ, ಅದಕ್ಕೆ ತೋರಿಸಲಿಲ್ಲ ಎಂದು ವ್ಯಂಗ್ಯದ ಶೈಲಿಯಲ್ಲಿ ಕುಮಾರಸ್ವಾಮಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.