ಮೈಸೂರು: ಹುಣಸೂರು ಉಪಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಸ್ಪರ್ಧೆ ಮಾಡದಂತೆ ಸಿಎಂ ಬಿ ಎಸ್ ಯಡಿಯೂರಪ್ಪನವರು ಎಚ್ಚರಿಸಿದ್ದರು. ಆದರೆ, ಹೆಚ್. ವಿಶ್ವನಾಥ್ ಅವರು ನಾನು ಗೆಲ್ಲುತ್ತೀನಿ ಅಂತಾ ಉಪಚುನಾವಣೆಗೆ ನಿಂತು ವಿಫಲವಾದರು. ಸದ್ಯ ಸಿಎಂ ಏನು ಮಾಡುತ್ತಾರೆ ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುತ್ತೂರು ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ ಸೋಮಶೇಖರ್, ಹುಣಸೂರು ಉಪಚುನಾವಣೆಯಲ್ಲಿ ಹಿನ್ನೆಡೆಯಾಗಲಿದೆ. ಹಾಗಾಗಿ ಕ್ಷೇತ್ರ ಬಿಟ್ಟುಕೊಡಿ, ಎಂಎಲ್ಸಿ ಮಾಡಿ ಮಂತ್ರಿ ಮಾಡ್ತೀವಿ. ಗೆಲ್ಲದೇ ಇದ್ದರೆ ಮಂತ್ರಿ ಮಾಡುವುದು ಕಷ್ಟವಾಗಲಿದೆ ಎಂದು ಸಿಎಂ ಎಚ್ಚರಿಕೆ ಕೊಟ್ಟಿದ್ದರು ಎಂದು ತಿಳಿಸಿದರು.
ಆದರೆ, ವಿಶ್ವನಾಥ್ ಅವರು ನಾನು ಗೆಲ್ಲುತ್ತೀನಿ ಅಂತಾ ಬಿ ಫಾರಂ ಪಡೆದರು. ಸದ್ಯ ಸಿಎಂ ಏನು ಮಾಡುತ್ತಾರೆ ಎನ್ನುವುದು ಅವರಿಗೆ ಬಿಟ್ಟ ವಿಚಾರವೆಂದರು. ಆರ್. ಶಂಕರ್ ಅವರಿಗೆ ಸ್ಪರ್ಧೆ ಮಾಡದಂತೆ ಹೇಳಿದಾಗ, ಅದಕ್ಕೆ ಅವರು ಒಪ್ಪಿಕೊಂಡರು. ಅದರಂತೆ ಅವರಿಗೆ ಎಂಎಲ್ಸಿ ಮಾಡುತ್ತಾರೆ. ಸೋತ ಅಭ್ಯರ್ಥಿಗಳಿಗೆ ಮಂತ್ರಿ ಸ್ಥಾನ ಕೊಡುವುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದರು.
ಮುಖ್ಯಮಂತ್ರಿಗಳು ಗೆದ್ದಿರುವ 11 ಮಂದಿಗೆ ಸಚಿವ ಸ್ಥಾನಕೊಡುತ್ತಾರೆ ಎಂಬ ವಿಶ್ವಾಸವಿದೆ. ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ ಎಂದರು. ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ನೇಮಕ ಮಾಡಲು ಅವರಿಗೆ ಆಗಿಲ್ಲವೆಂದು ವ್ಯಂಗ್ಯವಾಡಿದರು.