ಮೈಸೂರು: ತುಂಬಿದ ಕಬಿನಿಗೆ ಬಾಗಿನ ಅರ್ಪಿಸಲು ಬರುವ ಮಂತ್ರಿ-ಮಹೋದಯರು, ಕಬಿನಿ ಅಬ್ಬರದ ಪ್ರವಾಹದಿಂದ ಸೂರು, ಹೊಲ-ಜಮೀನು ಕಳೆದುಕೊಂಡು ನಿರಾಶ್ರಿತರವಾದವರ ಕಣ್ಣೀರು ಒರೆಸಲು ಮುಂದಾಗುತ್ತಿಲ್ಲ.
ಹೌದು, ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ನಿರಂತರವಾಗಿ ಕಬಿನಿ ಜಲಾಶಯ ತುಂಬಿ ಹರಿಯುರುವುದರಿಂದ ಪ್ರವಾಹ ಎದುರಾಗಿ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ತಿ.ನರಸೀಪುರ ತಾಲೂಕಿನ ನದಿಪಾತ್ರದ ಜನರಿಗೆ ಬಹಳಷ್ಟು ಸಂಕಷ್ಟಗಳು ಎದುರಾಗುತ್ತಲೇ ಇದೆ.
ಕಳೆದ ವರ್ಷ ಕಪಿಲೇಶ್ವರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕಬಿನಿ ಜಲಾಶಯದ ಮುಂಭಾಗದ ಸೇತುವೆ ದುರಸ್ತಿಗೆ 20 ಕೋಟಿ ರೂ.ನೀಡುವುದಾಗಿ ಭರವಸೆ ನೀಡಿದ್ದರು. ಇದರಿಂದ ಕಬಿನಿ ಜಲಾಶಯದ ಬಳಿ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೇ ಕಬಿನಿ ಜಲಾಶಯದಿಂದ ಹ್ಯಾಂಡ್ ಪೋಸ್ಟ್ 12 ಕಿ.ಮೀ.ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾತು ಕೊಟ್ಟಿದ್ದರು.
ಆದರೆ ದಿನಗಳು ಉರುಳುತ್ತವೇ ಇವೆ, ಕಬಿನಿ ಮುಂಭಾಗ ಹಳೆ ಸೇತುವೆ ಕೆಡವಿ ಎತ್ತರ ಮಟ್ಟದಲ್ಲಿ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಹಲವಾರು ಬಾರಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಇವರ ಕಷ್ಟಗಳಿಗೆ ಓಗೊಡುತ್ತಿಲ್ಲ. ಪ್ರತಿವರ್ಷ ಕಬಿನಿ ತುಂಬಿ ಹರಿದಾಗ ಬಾಗಿನ ಅರ್ಪಿಸಿ ಬಾಯಿ ಮಾತಿಗಷ್ಟೇ ಭರವಸೆ ನೀಡುತ್ತಾರೆ.
ಎಚ್.ಡಿ.ಕೋಟೆ ನಿವಾಸಿ, ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು, 'ಈಟಿವಿ ಭಾರತ್'ನೊಂದಿಗೆ ಮಾತನಾಡಿ, ಮಂತ್ರಿಗಳು ಬಾಗಿನ ಅರ್ಪಿಸಿ ಭರವಸೆ ನೀಡಿ ಹೋಗುತ್ತಾರೆ. ಕಬಿನಿ ಜಲಾಶಯದ ಪ್ರವಾಹದಿಂದ ಉಂಟಾಗುವ ಅಪಾಯ ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಆ.21ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆ. 21ರಂದು ಕಬಿನಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದು, ಕಳೆದ ವರ್ಷ ಕೊಟ್ಟ ಮಾತು ನೆನಪು ಮಾಡಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.