ಮೈಸೂರು: ರಾಜ್ಯದ ಹಲವೆಡೆ ಪೌರಕಾರ್ಮಿಕರಿಗೆ ನೇರ ಪಾವತಿಯಲ್ಲಿ ಸಂಬಳ ದೊರೆಯುತ್ತದೆ. ಆದರೆ, ಮೈಸೂರು ನಗರದಲ್ಲಿ ಮಾತ್ರ ಗುತ್ತಿಗೆ ಆಧಾರದ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ತಮಗೂ ಕೂಡ ಸಂಬಳ ನೇರಪಾವತಿಯಾಗಬೇಕು, ಇಲ್ಲವಾದಲ್ಲಿ ಈ ಬಾರಿಯ ದಸರಾ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಪೌರಕಾರ್ಮಿಕರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮುಂಭಾಗ, ಮೈಸೂರು ನಗರ ಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದಿಂದ ಪ್ರತಿಭಟನೆ ನಡೆಸಿ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರು ಹಿಡಿತ ಸಾಧಿಸುತ್ತಿದ್ದಾರೆ. ಹೀಗಾಗಿ ನೇರ ಪಾವತಿ ಪದ್ದತಿ ಜಾರಿಗೆ ತರುತ್ತಿಲ್ಲ. ಪಾಲಿಕೆಯ ಕೌನ್ಸಿಲ್ ಅನುಮೋದನೆ ಪಡೆದು ಪಾಲಿಕೆಯಲ್ಲಿರುವ 1,563 ಮಂದಿ ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ನೇರ ಪಾವತಿ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿಯ ಆದೇಶವನ್ನು ಪಾಲಿಕೆ ಅಧಿಕಾರಿಗಳು ಪಾಲಿಸಲು ಮುಂದಾಗುತ್ತಿಲ್ಲವೆಂದು ಕಿಡಿಕಾರಿದರು.