ಮೈಸೂರು: ಆರು ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದ ತಾಯಿ, ಮಲತಂದೆ ಹಾಗೂ ಅಜ್ಜಿಯನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ಯಾದನಹಳ್ಳಿ ಗ್ರಾಮದ ಪವಿತ್ರ(23), ಈಕೆಯ ಎರಡನೇ ಪತಿ ಸೂರ್ಯ(23) ಮತ್ತು ಪವಿತ್ರ ತಾಯಿ ಗೌರಮ್ಮ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ...
ಶ್ಯಾದನಹಳ್ಳಿ ಗ್ರಾಮದ ವಾಸಿ ಪವಿತ್ರ 8 ವರ್ಷಗಳ ಹಿಂದೆ ಸಿದ್ದೇಶ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ ಜಯಲಕ್ಷ್ಮಿ ಎಂಬ 6 ವರ್ಷದ ಹೆಣ್ಣು ಮಗುವಿತ್ತು. ಆದರೆ, ಮೊದಲ ಗಂಡ ಬದುಕಿರುವಾಗಲೇ ಪವಿತ್ರ ಸೂರ್ಯ ಎಂಬಾತನನ್ನ 2ನೇ ಮದುವೆ ಮಾಡಿಕೊಂಡಿದ್ದಳು. ಎರಡನೇ ಪತಿ ಸೂರ್ಯ ಹಾಗೂ ಪವಿತ್ರ ದಾಂಪತ್ಯಕ್ಕೆ ಮೂರು ತಿಂಗಳು ಹೆಣ್ಣು ಮಗು ಇದೆ.
ಪವಿತ್ರಳ ಮೊದಲ ಗಂಡ ಸಿದ್ದೇಶನಿಗೆ ಜನಿಸಿದ್ದ ಮಗು ಜಯಲಕ್ಷ್ಮಿ ಬದುಕಿದ್ದಲ್ಲಿ ಮುಂದೆ ಕಷ್ಟ ಆಗುತ್ತದೆ ಅಂತಾ ಯೋಚಿಸಿ ಮಲತಂದೆ ಸೂರ್ಯ, ತಾಯಿ ಪವಿತ್ರ ಮತ್ತು ಪವಿತ್ರಳ ತಾಯಿ ಗೌರಮ್ಮ ಸೇರಿಕೊಂಡು ಆ.25ರ ಬೆಳಿಗ್ಗೆ 5.30ರಲ್ಲಿ ಶ್ಯಾದನಹಳ್ಳಿಯ ಮನೆಯಲ್ಲಿ ಮಲಗಿದ್ದ ಜಯಲಕ್ಷ್ಮಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶ ಮಾಡುವ ಉದ್ದೇಶದಿಂದ ಇದ್ದಕ್ಕಿದ್ದಂತೆಯೇ ಮಗು ಮೃತಳಾಗಿದ್ದಾಳೆಂದು ಸುಳ್ಳು ಹೇಳಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ಇದರಿಂದ ಅನುಮಾನಗೊಂಡ ಜಯಲಕ್ಷ್ಮಿಯ ಮೊದಲ ತಂದೆ ಸಿದ್ದೇಶ್, ಮಗಳನ್ನು ಕೊಲೆ ಮಾಡಿದ್ದಾರೆಂದು ಸೆ.2ರಂದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಮೂವರನ್ನು ವಶಕ್ಕೆ ಪಡೆದು ವಿಚಾಸಿದ್ದಾಗ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಲೆ ಆರೋಪಿಗಳನ್ನ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.