ಮೈಸೂರು: ನಂಜನಗೂಡಿನ ದೇವಸ್ಥಾನದ ಬಳಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.
ಅಕ್ಟೋಬರ್ 1ರಂದು ನಂಜನಗೂಡು ದೇವಸ್ಥಾನದ ಬಳಿಯಿದ್ದ ಮೂರು ವರ್ಷದ ಕವಿತಾ ಎಂಬ ಮಗುವನ್ನು ವ್ಯಕ್ತಿವೋರ್ವ ಅಪಹರಿಸಿದ್ದ. ಮಗುವಿನ ತಾಯಿ ಪಾರ್ವತಿ ಎಂಬಾಕೆ ಮೂಲತಃ ಕೆ.ಆರ್.ನಗರ ತಾಲೂಕಿನವರಾಗಿದ್ದು, ಹೊಟ್ಟೆ ಪಾಡಿಗಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಭಿಕ್ಷೆ ಬೇಡಿ ಮಗುವನ್ನು ಸಾಕುತ್ತಿದ್ದಳು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ಮಗುವನ್ನು ಅಪಹರಿಸಿಕೊಂಡು ಹೋಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಪಾರ್ವತಿ ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಗಂಗಾರಾಜು (47) ಎಂಬಾತನನ್ನು ಇಂದು ಬಂಧಿಸಿದ್ದಾರೆ.
ಭಿಕ್ಷುಕಿಯ ಎರಡನೇ ಮಗುವನ್ನೂ ಅಪಹರಿಸಿದ ಖದೀಮ: ದೂರು ದಾಖಲು
ನಂಜನಗೂಡು ಪಟ್ಟಣ ಪೊಲೀಸರು ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡ ರಚನೆ ಮಾಡಿ ತೀವ್ರವಾಗಿ ತನಿಖೆ ನಡೆಸಿದ್ದರು. ಅನುಮಾನಾಸ್ಪದವಾಗಿ ದೇವಾಲಯದ ಬಳಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ವಿಚಾರಿಸಿದಾಗ ಗಂಗಾರಾಜು ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ಕಾರ್ಯಪೃವೃತ್ತರಾದ ಪೊಲೀಸ್ ತಂಡ, ಹೆಚ್.ಡಿ.ಕೋಟೆ ತಾಲೂಕಿನ ಹುಣಸೆಕುಪ್ಪೆ ಗ್ರಾಮದಲ್ಲಿ ಗಂಗರಾಜು ಇರುವಿಕೆ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.
ಸದ್ಯ ಬಾಲಕಿ ಕವಿತಾಳನ್ನು ನಗರದ ಬಾಪೂಜಿ ಮಕ್ಕಳ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿ ಗಂಗಾರಾಜು ಮಗು ಅಪಹರಣ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಗಂಗರಾಜುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.