ಮೈಸೂರು: ಸಿಎಂ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಉಚಿತ ಲಸಿಕೆ ಬಗ್ಗೆ ಮಾಹಿತಿ ನಿಡಲಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಾಗೂ ಲಸಿಕೆ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳ ಸಭೆ ನಡೆಸಲು ಆಗಮಿಸಿದ ಸಚಿವ ಕೆ.ಸುಧಾಕರ್ ಮಾಧ್ಯಮಗಳ ಜೊತೆ ಮಾತನಾಡಿ, ಆಸ್ಪತ್ರೆಯಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಡಿಸ್ಚಾರ್ಜ್ ಆಗಿದ್ದು, ಲಸಿಕೆ ಕುರಿತು ಸಭೆ ನಡೆಸುತ್ತಾರೆ. ಈ ಸಭೆಯಲ್ಲಿ ಉಚಿತ ಲಸಿಕೆ ನೀಡುವ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು.
ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ. ಪ್ರತಿಪಕ್ಷಗಳು ವಿನಾ ಕಾರಣ ಆರೋಪ ಮಾಡುತ್ತಿವೆ. ರಾಜಸ್ಥಾನಕ್ಕೆ ಅಮೆರಿಕದಿಂದ ಲಸಿಕೆ ಬಂದಿದೆಯಾ?. ಎಲುಬಿಲ್ಲದ ನಾಲಿಗೆ ಅಂತಾ ಏನೆನೋ ಮಾತನಾಡಬಾರದು. ಇಡೀ ಪ್ರಪಂಚಕ್ಕೆ ಕೊರೊನಾ ಆವರಿಸಿದೆ. ಇಂಥ ಸ್ಥಿತಿಯಲ್ಲಿ ಪೂರ್ವಸಿದ್ಧತೆ ಯಾರಿಗೂ ಇರಲ್ಲ. ಈ ವಿಚಾರದಲ್ಲಿ ಆರೋಪ ಮತ್ತು ಪ್ರತ್ಯಾರೋಪ ಮಾಡಬಾರದು ಎಂದು ಡಾ. ಸುಧಾಕರ್ ಹೇಳಿದರು.
ಆಕ್ಸಿಜನ್ ಕೊರತೆಯನ್ನು ನೀಗಿಸಲು 40 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲು ಜಿಂದಾಲ್ ಕಂಪನಿ ಒಪ್ಪಿಕೊಂಡಿದೆ. ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಿಗೂ ಜಂಬೋ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಲಿಕ್ವಿಡ್ ಆಕ್ಸಿಜನ್ ಸಹ ಒದಗಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಸದ್ಯ ಆಕ್ಸಿಜನ್ ಸಮಸ್ಯೆ ಇಲ್ಲ ಎಂದರು.
ಜಿಲ್ಲಾ ಕೇಂದ್ರಗಳಿಗೆ 1500 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗಿದ್ದು, ಇದರ ಪೂರೈಕೆಗೆ ಸಿಎಂ ಕೇಂದ್ರ ಸಚಿವ ಪಿಯೂಷ್ ಗೋಯಲ್ಗೆ ಆಕ್ಸಿಜನ್ ಪೂರೈಸುವಂತೆ ಪತ್ರ ಬರೆದಿದ್ದಾರೆ ಎಂದರು.
ರೆಮ್‌ಡೆಸಿವಿರ್ ಔಷಧಿ ಲೈಫ್ ಸೇವಿಂಗ್ ಡ್ರಗ್ಸ್ ಅಲ್ಲ. ಇದನ್ನು ತೆಗೆದುಕೊಂಡರೆ ಕೊರೊನಾ ಹೋಗುವುದು ಎಂಬ ಭಾವನೆ ಜನರಲ್ಲಿ ಬಂದಿದೆ. ಇದು ತಪ್ಪು ಗ್ರಹಿಕೆ. ಇದರಿಂದ ಈ ಔಷಧಿಗೆ ಬೇಡಿಕೆ ಬಂದಿದ್ದು ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಎಂದರು.
ರೆಮ್‌ಡೆಸಿವಿರ್ ಔಷಧಿಯನ್ನು ತಯಾರು ಮಾಡುವುದನ್ನು ಕಾರ್ಖಾನೆಗಳು ನಿಲ್ಲಿಸಿದ್ದವು. ಈಗ ಬೇಡಿಕೆ ಹೆಚ್ಚಾದ ಪರಿಣಾಮ ಪುನಃ ಈ ಔಷಧಿಯನ್ನು ತಯಾರು ಮಾಡಲು ಕಾರ್ಖಾನೆಗಳು ಆರಂಭಿಸಿವೆ. ಆದರೆ ಜನಸಾಮಾನ್ಯರಲ್ಲಿ ಈ ಔಷಧಿ ತೆಗೆದುಕೊಂಡರೆ ಕೊರೊನಾ ಹೋಗುತ್ತದೆ ಎಂಬ ತಪ್ಪು ಗ್ರಹಿಕೆ ಇದೆ ಎಂದು ಸಚಿವ ಡಾ. ಕೆ.ಸುಧಾಕರ್ ಇದೇ ಸಂದರ್ಭದಲ್ಲಿ ತಿಳಿಸಿದರು.