ಮೈಸೂರು: ಪ್ರವಾಹದ ಸಂದರ್ಭದಲ್ಲಿ ರಾಜ್ಯದಲ್ಲಿ ಪೂರ್ಣಪ್ರಮಾಣದ ಸರ್ಕಾರ ಇರಬೇಕಿತ್ತು. ಆದರೂ ಆಗಸ್ಟ್ 15ರ ನಂತರ ಸಂಪುಟ ರಚನೆಯಾಗುತ್ತದೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇಂದು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಜ್ಯದ ಅರ್ಧಭಾಗದ ಜಿಲ್ಲೆಗಳು ಮುಳುಗಿವೆ. ಆದರೂ ಈಗ ಸಹಜ ಸ್ಥಿತಿಗೆ ಬರುತ್ತಿದ್ದು, ಯಡಿಯೂರಪ್ಪ ಅವರು ಶಕ್ತಿ ಮೀರಿ ಪ್ರವಾಹದ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಪ್ರವಾಹ ಕೂಡ ಅರಿವಿಲ್ಲದೆ ಬಂದಿದ್ದು, ಹೊಸ ಸರ್ಕಾರವು ಅರಿವಿಲ್ಲದೆ ಬಂದುಬಿಟ್ಟಿದೆ. ಅದಕ್ಕಾಗಿ ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಆಗಬೇಕು, ಸ್ವಾತ್ರಂತ್ಯ ದಿನಾಚರಣೆಯ ನಂತರ ಸಂಪುಟ ರಚನೆ ಮಾಡಲಿದ್ದಾರೆ. ಇನ್ನೆರಡು ಮೂರು ದಿನ ಕಾಯಬೇಕು ಅಷ್ಟೇ ಎಂದರು.
ವಿಶ್ವನಾಥ್ ಅವರ ಮುಂದಿನ ರಾಜಕೀಯ ನಡೆ ಏನು?
ಹಿಂದೆಯೂ, ಮುಂದೆಯೂ ನನ್ನ ರಾಜಕೀಯ ನಡೆಯುತ್ತಲೇ ಇರುತ್ತದೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ರಾಜಕೀಯ ಗುರಿ. ಸಂಪುಟದಲ್ಲಿ ನಮಗೆ ಸ್ಥಾನ ನೀಡುವ ಕುರಿತು ಇರುವ ಸುದ್ದಿಗಳೆಲ್ಲಾ ಊಹಾಪೋಹಗಳು ಮತ್ತು ಉತ್ಪ್ರೇಕ್ಷೆಯ ಮಾತುಗಳಷ್ಟೇ. ಮುಂದೆ ಏನಾಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ ಎಂದು ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ ಹೇಳಿದ್ರು.
ಇನ್ನು ಯಡಿಯೂರಪ್ಪ ಅವರು ತಮಗಿರುವ ಸಮಾಧಾನ ಮತ್ತು ಸಹಭಾಗಿತ್ವವನ್ನು ಸರ್ವರ ಜೊತೆ ಕಾಪಾಡಿಕೊಳ್ಳಬೇಕು ಹಾಗೂ ಎಲ್ಲೂ ಉದ್ವೇಗಕ್ಕೆ ಒಳಗಾಗದೆ ಎಲ್ಲವನ್ನೂ ನಿಭಾಯಿಸುವಂತೆ ಆಗಬೇಕು ಎಂದು ಸಿಎಂಗೆ ವಿಶ್ವನಾಥ್ ಸಲಹೆ ನೀಡಿದರು. ಅಲ್ಲದೆ, ಯಡಿಯೂರಪ್ಪ ಅವರು ಉಳಿದ ಮೂರುವರೆ ವರ್ಷಗಳ ಕಾಲ ಉತ್ತಮ ಆಡಳಿತ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.