ಮೈಸೂರು: ಕರ್ನಾಟಕ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಭತ್ತ, ರಾಗಿ,ಜೋಳ ಖರೀದಿ ಮಾಡಿ, ರಾಜ್ಯದ ರೈತರನ್ನು ರಕ್ಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಿಶೇಷ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಅಕ್ಕಿ ಖರೀದಿ ಬೇಡಿಕೆ ಸಲ್ಲಿಸಲಾಗಿದೆ. ಅದಕ್ಕೆ ಕೇಂದ್ರ ಸಮ್ಮತಿ ನೀಡಿಲ್ಲ ಎಂದು ಹೇಳಿದ್ದೀರಿ. ರಾಜ್ಯದ ಜನರ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಬದಲು ರಾಜ್ಯದ ರೈತರಿಂದಲೇ ನೇರವಾಗಿ ಭತ್ತ, ರಾಗಿ,ಜೋಳ ಖರೀದಿ ಮಾಡಬೇಕು. ಅದನ್ನು ಬಡವರಿಗೆ ಅನ್ನ ಭಾಗ್ಯ ಯೋಜನೆಯಲ್ಲಿ ವಿತರಿಸುವ ಯೋಜನೆ ಕೈಗೆತ್ತಿಕೊಂಡರೆ ಖಂಡಿತವಾಗಿ ರಾಜ್ಯದ ರೈತರಿಗೂ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ರೈತ ಬೆಳೆದ ಬೆಳೆಯನ್ನೂ ಖರೀದಿ ಮಾಡಿದರೆ, ಬಡವರಿಗೆ ಅನುಕೂಲವಾಗುತ್ತದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಾಕಷ್ಟು ಭತ್ತ ಬೆಳೆಯುತ್ತಿದ್ದಾರೆ. ನೇರವಾಗಿ ಖರೀದಿಸಿದರೆ ರೈತರಿಗೆ ಲಾಭ ಸಿಗಲಿದೆ. ಈ ದಿಕ್ಕಿನಲ್ಲಿ ತಾವು ಚಿಂತನೆ ನಡೆಸುವುದು ಬಹಳ ಮುಖ್ಯ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ಬಡವರಿಗೆ 200 ಯೂನಿಟ್ ಉಚಿತ ವಿದ್ಯುತ ನಿಡುವ ಯೋಜನೆ ಘೋಷಣೆ ಮಾಡಿದ್ದೀರಿ, ಅದರ ಉತ್ಪಾದನೆಗೆ ತಗಲುವ ವೆಚ್ಚ ಎಷ್ಟು? ಸರ್ಕಾರದಿಂದ ಆಗುವ ಖರ್ಚು ಎಷ್ಟು ಎಂದು ಲೆಕ್ಕ ಹಾಕಬೇಕು. ಅದರ ಬದಲು ಸಣ್ಣ ಮಟ್ಟದ ಒಂದು ಕೆವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಯೋಜನೆಯನ್ನು ಪ್ರತಿ ಮನೆಗೆ ಕಲ್ಪಿಸಿದರೆ ಶಾಶ್ವತ ಯೋಜನೆಯಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸರ್ಕಾರಕ್ಕೂ ಪ್ರತಿ ವರ್ಷ ಹೂರೆಯಾಗುವುದು ಕಡಿಮೆಯಾಗುತ್ತದೆ. ಈ ಬಗೆಯು ತಾವು ಗಂಭೀರವಾಗಿ ಚಿಂತೆನೆ ನಡೆಸಬೇಕು ಎಂದು ಹೇಳಿದ್ದಾರೆ.
ಹೊರರಾಜ್ಯಗಳಿಂದ ಅಕ್ಕಿ ಖರೀದಿ: ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಹೊರರಾಜ್ಯಗಳಿಂದ ತರಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಯೋಜನೆಗೆ ಅಗತ್ಯ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ತಮ್ಮ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜುಲೈ ಒಂದರಿಂದ ಜಾರಿಗೆ ತರಲು ಎಲ್ಲ ಕಸರತ್ತು ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಯಾವ ಯಾವ ರಾಜ್ಯಗಳಿಂದ ತರಬಹುದು ಎಂಬ ಕುರಿತು ಮಾಹಿತಿ ಪಡೆದಿದ್ದಲ್ಲದೆ, ಈ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಿದ್ಧ ಎಂಬ ಸಂದೇಶ ರವಾನಿಸಿದರು. ಈ ಮಧ್ಯೆ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ಹಿಂಜರಿದ ಬೆಳವಣಿಗೆಯನ್ನು ಖಂಡಿಸಿದರು.
ಇದನ್ನೂಓದಿ:ಬಾರದ ಮುಂಗಾರು ಮಳೆ: ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದ ದಾವಣಗೆರೆ ರೈತರಿಗೆ ನಿರಾಶೆ