ಮೈಸೂರು: 4 ಲಕ್ಷ ರೂಪಾಯಿ ಕೊಟ್ಟರೆ ಕೆ- ಸೆಟ್ ಪರೀಕ್ಷೆ ಪಾಸ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಮ್. ಲಕ್ಷ್ಮಣ್ ಆರೋಪಿಸಿದ್ದಾರೆ.
ಈ ಟಿವಿ ಭಾರತ್ ಜೊತೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಮ್. ಲಕ್ಷ್ಮಣ್ ರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸಕರ ಹುದ್ದೆಗೆ ನಿಟ್ ಪರೀಕ್ಷೆ ನಡೆಸಲಾಗುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಉಪನ್ಯಾಸಕರ ಹುದ್ದೆಗೆ ಆಯ್ಕೆ ಮಾಡಲು ಕೆ- ಸೆಟ್ ಎಂಬ ಅರ್ಹತಾ ಪರೀಕ್ಷೆಯಲ್ಲಿ ಕಳೆದ 5 ವರ್ಷಗಳಿಂದ ಮೈಸೂರು ವಿವಿ ನಡೆಸುತ್ತಾ ಬಂದಿದೆ. ಆದರೆ ಈ ಕೆ-ಸೆಟ್ ಪರೀಕ್ಷೆಯನ್ನು ವಿವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು 4 ಬಾರಿ ಪರೀಕ್ಷೆ ಬರೆದರೂ ಪಾಸ್ ಆಗಲಿಲ್ಲ. ಆದರೆ, ಏನೂ ಬರದ ವಿದ್ಯಾರ್ಥಿಗಳು ಮೊದಲ ಬಾರಿಗೆ ಪಾಸ್ ಆಗುತ್ತಿದ್ದಾರೆ. ಹೇಗೆ ಅಂದರೆ ಇವರು 2.5 ಲಕ್ಷದಿಂದ 5 ಲಕ್ಷದ ವರೆಗೆ ಹಣ ಕೊಡುತ್ತಾರೆ. ಆಗ ಸುಮ್ಮನೆ ಪರೀಕ್ಷೆಗೆ ಹಾಜರಾಗುತ್ತಾರೆ. ಖಾಲಿ ಓಎಮ್ಆರ್ ಶೀಟ್ ಕೊಟ್ಟು ಬರುತ್ತಾರೆ. ನಂತರ ಮೌಲ್ಯಮಾಪನ ಸಂದರ್ಭದಲ್ಲಿ ಖಾಲಿ ಓಎಮ್ಆರ್ ಶೀಟ್ ಫಿಲ್ ಮಾಡಿ ಪಾಸ್ ಮಾಡುತ್ತಾರೆ ಎಂದು ಲಕ್ಷ್ಮಣ್ ಆರೋಪಿಸುತ್ತಾರೆ.
ಈ ರೀತಿ ಅಕ್ರಮ ನಡೆಸಲು ಗಂಗೋತ್ರಿ ಕ್ಯಾಂಪಸ್ ನಲ್ಲಿ ಏಜೆಂಟ್ಗಳು ಇದ್ದಾರೆ. ಇವರಿಗೆ 4 ಲಕ್ಷ ನೀಡಿದರೆ ಕೆ-ಸೆಟ್ ಪಾಸ್ ಮಾಡುತ್ತಾರೆ. ಆದ್ದರಿಂದ ಮುಂದಿನ ಏಪ್ರಿಲ್ 11 ರಂದು ನಡೆಯುವ ಕೆ- ಸೆಟ್ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಅಕ್ರಮ ತಡೆಯಲು ದಯವಿಟ್ಟು ಉನ್ನತ ಶಿಕ್ಷಣ ಸಚಿವರು ಈ ಕೆ-ಸೆಟ್ ಪರೀಕ್ಷೆಯನ್ನು ಆನ್ಲೈನ್ ಮೂಲಕ ನಡೆಸಲಿ ಎಂದು ಕೆಪಿಸಿಸಿ ವಕ್ತಾರರು ಒತ್ತಾಯಿಸಿದರು.