ಮೈಸೂರು : ದೇಶವನ್ನು ಬಾಧಿಸುತ್ತಿರುವ ಕೊರೊನಾ ಸೋಂಕು ನಿವಾರಣೆಯಾಗಲಿ ಎಂದು ಟಿಬೇಟಿಯನ್ ಬೈಲುಕುಪ್ಪದ ಕ್ಯಾಂಪ್ನಲ್ಲಿ ದಲೈಲಾಮ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಯಿತು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದಲ್ಲಿರುವ ಟಿಬೇಟಿಯನ್ ನಿರಾಶ್ರಿತ ಶಿಬಿರದಲ್ಲಿ ಬೌದ್ಧ ಸನ್ಯಾಸಿಗಳು ಬೌದ್ಧ ಧರ್ಮಗುರು ದಲೈಲಾಮ ಭಾವಚಿತ್ರವನ್ನು ಪೀಠದ ಮೇಲೆ ಇಟ್ಟು ಕೊರೊನಾ ವೈರಸ್ನಿಂದ ಬಲಿಯಾದ ಆತ್ಮಗಳಿಗೆ ಶಾಂತಿ ಸಿಗಲಿ, ಕೋವಿಡ್ನಿಂದ ದೇಶ ಮುಕ್ತವಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ವಿಭಿನ್ನ ಪೂಜೆ : ಸಾಮಾನ್ಯವಾಗಿ ಭಾರತದಲ್ಲಿ ಇಲ್ಲಿನ ಸಂಸ್ಕೃತಿಯ ಪ್ರಕಾರ ಹಣ್ಣು-ಕಾಯಿ, ಗಂಧದ ಕಡ್ಡಿ, ಸಾಂಬ್ರಾಣಿ ಸೇರಿದಂತೆ ಇತರ ಪೂಜಾ ಸಾಮಾಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.
ಆದರೆ, ಟಿಬೇಟಿಯನ್ನರು ಶಾಂತಿಧೂತ ತಮ್ಮ ಧಾರ್ಮಿಕ ಗುರು ದಲೈಲಾಮ ಭಾವ ಚಿತ್ರವನ್ನು ಇಟ್ಟು ಅದರ ಮುಂದೆ ವಿವಿಧ ಬಗೆಯ ಜ್ಯೂಸ್, ಆಹಾರ ಪದಾರ್ಥಗಳು, ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಬಳಿಕ ಬೌದ್ಧ ಭಿಕ್ಷುಗಳು ಗೋಧಿ ಹಿಟ್ಟನ್ನು ಹಿಡಿದು 5 ನಿಮಿಷಗಳ ಕಾಲ ಪೂಜೆ ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸು ಎಂದು ಆಕಾಶಕ್ಕೆ ಗೋಧಿ ಹಿಟ್ಟನ್ನು ಎರಚಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.