ಮೈಸೂರು: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಚರ್ಚೆ ನಡೆಸಲು ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ನ. 30 ರಂದು ಮಹಾರಾಷ್ಟ್ರ ಗಡಿ ವಿಚಾರದ ತೀರ್ಪು ಬರಲಿದ್ದು, ಆ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಪೂರ್ವ ಚರ್ಚೆ ನಡೆಸುತ್ತೇನೆ. ಜೊತೆಗೆ ಬೇರೆ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗಡಿ ವಿವಾದದ ಬಗ್ಗೆ ಸರ್ವಪಕ್ಷಗಳ ಜೊತೆ ಮಾತನಾಡುತ್ತೇನೆ. ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರವಾಗಿ ನನ್ನೊಂದಿಗೆ ಕೇಂದ್ರದಿಂದ ಯಾರೂ ಸಮಾಲೋಚನೆ ಮಾಡಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕೆಂಬುದು ನಮ್ಮ ಪಕ್ಷದ 30 ವರ್ಷಗಳ ನಿಲುವು. ಈ ಕುರಿತು ನಾನು ಸಹ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕುತ್ತಿದ್ದೇನೆ ಎಂದರು.
ಇದನ್ನೂ ಓದಿ: ನಮಗೆ ಸಂಪೂರ್ಣ ವಿಶ್ವಾಸ ಇದೆ, ಕರ್ನಾಟಕದ ಯಾವುದೇ ಭಾಗ ಮಹಾರಾಷ್ಟ್ರಕ್ಕೆ ಹೋಗಲ್ಲ: ಸಿಎಂ ಬೊಮ್ಮಾಯಿ
ಒಕ್ಕಲಿಗರ ಮೀಸಲಾತಿ ವಿಚಾರವಾಗಿ ಮಾತನಾಡಿ, ಡೆಡ್ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ, ಅವರ ಲೆಟರ್ ನನ್ನ ಕೈ ಸೇರಲಿ, ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ. ನನಗೆ ರಾಜಕೀಯ ಒತ್ತಡ ಇರುವುದು ಸತ್ಯ. ನಾನು ಎಲ್ಲಾ ಪಕ್ಷಗಳ ಹಿತ ಕಾಯಬೇಕಿದೆ, ಆ ಕಾರಣಕ್ಕೆ ಎಲ್ಲಾ ರೀತಿಯಲ್ಲೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.