ಮೈಸೂರು: ರಾಜ್ಯದಲ್ಲಿ ಸೂತಕದ ಛಾಯೆ ಇದ್ದು, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 21ನೇ ತಾರೀಕಿನಂದು ಬಾಗಿನ ಅರ್ಪಿಸಲು ಬರುತ್ತಿರುವ ಸಂದರ್ಭದಲ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಇಂದು ಈ ಟಿವಿ ಭಾರತದ ಜೊತೆಗೆ ಮಾತನಾಡಿದ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆಯ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ರಾಜ್ಯದಲ್ಲಿ ಕೊರೊನಾ, ಪ್ರವಾಹ ಹಾಗೂ ಇತರ ಸಂಕಷ್ಟಗಳಿಂದ ಸೂತಕದ ಛಾಯೆ ಆವರಿಸಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಾಗಿನ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದರು.
ಜೊತೆಗೆ ಭೂ ಸುಧಾರಣಾ ಕಾಯ್ದೆ ರೈತರ ಬದುಕನ್ನೇ ಕಿತ್ತುಕೊಂಡಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಹಾಗೂ ಯಡಿಯೂರಪ್ಪ ಸರ್ಕಾರದ ರೈತ ವಿರೋಧಿ ಖಂಡಿಸಿ 21ನೇ ತಾರೀಕಿನಂದು ಕೆ.ಆರ್.ಎಸ್, ಕಬಿನಿಯಲ್ಲಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿದರು.
ಜೊತೆಗೆ ಕನ್ನಂಬಾಡಿ ಉಳಿಸಿ ಗಣಿಗಾರಿಕೆ ನಿಲ್ಲಿಸಿ, ಕೆ.ಆರ್.ಎಸ್ನಲ್ಲಿ ಒಡೆಯರ್ ಪ್ರತಿಮೆ ಮಾತ್ರ ನಿರ್ಮಿಸಿ ಎಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದ ಬಡಗಲಪುರ ನಾಗೇಂದ್ರ, ಈ ಸಂದರ್ಭದಲ್ಲಿ ಪೋಲಿಸರ ಅನುಮತಿ ಕೇಳಿದ್ದೇವೆ, ಅನುಮತಿ ನೀಡದಿದ್ದರೆ ಬಂಧನಕ್ಕೆ ಒಳಗಾಗಲು ಸಿದ್ದವಿದ್ದೇವೆ ಎಂದು ತಿಳಿಸಿದರು.