ಮೈಸೂರು: ಬಿಜೆಪಿಯವರಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಏನೂ ಕೆಲಸವಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡಿದ ಬಿಜೆಪಿಯವರ ಹೇಳಿಕೆಗೆ ಡಿಸಿಎಂ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಇಂದು ಸುತ್ತೂರಿನಲ್ಲಿ ಮಾತನಾಡಿದ ಡಿಸಿಎಂ ಬಿಜೆಪಿಯವರಿಗೆ ರಾಜ್ಯದಲ್ಲಿ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ. ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯ ಮಾಡಿದರೆ ಟೀಕೆ, ಪಾದಯಾತ್ರೆ ಮಾಡಿದ್ರೂ ಸಹಿಸೋದಿಲ್ಲ. ಇದನ್ನ ಏಕೆ ಮಾಡುತ್ತಿದ್ದಾರೆ ಎಂಬುದನ್ನೇ ಅವರು ಅರ್ಥ ಮಾಡಿಕೊಳ್ಳುವುದಿಲ್ಲ.
ನನಗೇನು ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಅನಿಸುತ್ತಿಲ್ಲ, ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ನಮ್ಮ ಉದ್ದೇಶ 5 ವರ್ಷ ಆಡಳಿತ ನಡೆಸುವ ಮೂಲಕ ಕರ್ನಾಟಕಕ್ಕೆ ಒಳ್ಳೆಯ ಆಡಳಿತ ಕೊಡಬೇಕು ಎಂಬುದುದಾಗಿದೆ. ಸಣ್ಣ ಪುಟ್ಟ ವ್ಯತ್ಯಾಸಗಳು ಹಾಗೂ ಹೇಳಿಕೆಗಳು ಅವರವರ ವೈಯಕ್ತಿಕಕ್ಕೆ ಬಿಟ್ಟಿದ್ದು. ಒಂದು ರಾಜಕೀಯ ಪಕ್ಷ ಪ್ರಾದೇಶಿಕ ಪಕ್ಷದ ಜೊತೆ ಅಧಿಕಾರ ನಡೆಸಿದರೆ ಇಂತಹ ಗೊಂದಲ ಸಹಜ ಎಂದರು.
ಇನ್ನೂ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದರೆ ಅದರ ಕ್ರೆಡಿಟ್ ಜೆಡಿಎಸ್ಗೆ ಹೋಗುತ್ತದೆ ಎಂದು ಹೇಳುವುದು ಸರಿಯಲ್ಲ. ಅವರು ರಾಜ್ಯದ ಮುಖ್ಯಮಂತ್ರಿಗಳು ಬರಿ ಜೆಡಿಎಸ್ನ ಮುಖ್ಯಮಂತ್ರಿಗಳಲ್ಲ.ಗ್ರಾಮ ವಾಸ್ತವ್ಯ ಮಾಡಿದರೆ ಅದರ ಕ್ರೆಡಿಟ್ ಸಮ್ಮಿಶ್ರ ಸರ್ಕಾರಕ್ಕೆ ಬರುತ್ತದೆ ಎಂದ ಡಿಸಿಎಂ ಪರಮೇಶ್ವರ್, ಇಂದು ಪಕ್ಷೇತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಿದ್ರು.