ಮೈಸೂರು: ದಲಿತ ಸಮಾಜಕ್ಕೆ ಸೇರಿದ ದಕ್ಷ ಡಿಸಿ ಬಿ.ಶರತ್ ಅವರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿದ್ದು ಘೋರ ಅನ್ಯಾಯ ಎಂದು ಭೋವಿ ಸಮಾಜದ ಮುಖಂಡ ಸೀತಾರಾಮ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ವರ್ಗಾವಣೆ ವಿರುದ್ಧ ಹೋರಾಟ ನಡೆಸಲು ಜಲದರ್ಶಿನಿ ಅಥಿತಿ ಗೃಹದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಶರತ್ ಅವರನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ, ಅದರ ಅವಶ್ಯಕತೆಯೂ ಇರಲಿಲ್ಲ. ಯಡಿಯೂರಪ್ಪ ಅವರನ್ನು ಕಾಣದ ಕೈಗಳು ಕಟ್ಟಿ ಹಾಕಿವೆ ಎಂದರು.
ದೆಹಲಿಯ ಆರೆಸ್ಸೆಸ್ ನಾಯಕರು ಹೇಳಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಅನಿಸುತ್ತಿದೆ. ಯಾರೇ ಜಿಲ್ಲಾಧಿಕಾರಿಯಾಗಿ ಬಂದರೂ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳಿದ್ದರೂ ಹೊರಗಡೆಯವರನ್ನು ನೇಮಕ ಮಾಡಿ ಸರ್ಕಾರ ದಲಿತ, ಅಲ್ಪ ಸಂಖ್ಯಾತರಿಗೆ ಅವಮಾನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.