ಮೈಸೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ನಾಳೆ ಆನ್ಲೈನ್ ಮೂಲಕ ಸಿಎಂ ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತಿ ವಿಷ್ಣುವರ್ಧನ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.
ಹಲವು ವರ್ಷಗಳಿಂದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಹಲವಾರು ಅಡ್ಡಿಗಳು ಎದುರಾಗುತ್ತಿದ್ದು, ಈಗ ಸ್ಮಾರಕ ನಿರ್ಮಾಣ ಮಾಡಲು ಕಾಲ ಕೂಡಿ ಬಂದಿದೆ. ಮೈಸೂರಿನ ಹೊರವಲಯದ ಮಾನಂದವಾಡಿ ರಸ್ತೆಯ ಉದ್ಬೂರು ಬಳಿಯ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸ್ಥಳ ನಿಗದಿಯಾಗಿದ್ದು, ನಾಳೆ ಭೂಮಿ ಪೂಜೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಜೆಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ.
ಹಲವು ವರ್ಷಗಳ ನಂತರ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸಂತಸ ತಂದಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ. ಮುಖ್ಯಮಂತ್ರಿ ಅವರು ತುಂಬಾ ಅಭಿಮಾನ ಮತ್ತು ಆತ್ಮೀಯತೆಯಿಂದ ಈ ಕೆಲಸ ಆಗಲೇಬೇಕೆಂದು ಹೇಳಿದ್ದಾರೆ. ಶಿಲಾನ್ಯಾಸವನ್ನು ಆನ್ಲೈನ್ ನಲ್ಲಿ ಸಿಎಂ ನೆರವೇರಿಸುತ್ತಿದ್ದಾರೆ. ಈ ಕಟ್ಟಡ ಪೂರ್ಣಗೊಂಡು ಎಲ್ಲರಿಗೂ ಉಪಯೋಗವಾಗಲಿ ಎಂಬುದು ನನ್ನ ಆಸೆ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.
ಅಭಿಮಾನಿಗಳಿಗೆ ಮನವಿ ಮಾಡಿದ ಭಾರತಿ ವಿಷ್ಣುವರ್ಧನ್: ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಡಿ ಎಂದು ಭಾರತಿ ವಿಷ್ಣುವರ್ಧನ್ ಮನವಿ ಮಾಡಿದ್ದಾರೆ. ಅಭಿಮಾನಿಗಳು ಸ್ಮಾರಕ ನಿರ್ಮಾಣದ ಸ್ಥಳಕ್ಕೆ ಬಾರದೇ, ಇರುವ ಸ್ಥಳದಲ್ಲೇ ಸಂಭ್ರಮಿಸುವಂತೆ ಅವರು ಕೇಳಿಕೊಂಡಿದ್ದಾರೆ.