ಮೈಸೂರು : ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಸುವುದಿಲ್ಲ. ಯಾವುದೇ ಕಾರಣಕ್ಕೂ ಭಗವದ್ಗೀತೆಯನ್ನು ಅಳವಡಿಸುವ ಚಿಂತನೆ ಸರ್ಕಾರ ನಡೆಸಿಲ್ಲ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರಣಗಳನ್ನು ನೀಡಿ ಪರೀಕ್ಷೆಗೆ ಹಾಜರಾಗದಿದ್ದರೆ ಮತ್ತೆ ಪರೀಕ್ಷೆ ನಡೆಸುವುದಿಲ್ಲ. ಈಗಾಗಲೇ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದರು.
ಇನ್ನು ಸದನವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ, ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿಗೆ ಶೀಘ್ರವೇ ಆಡಳಿತಾರೂಢ ನಾಯಕರು ಹಾಗೂ ಪ್ರತಿಪಕ್ಷದ ನಾಯಕರು ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ.
ಹಾಗಾಗಿ, ಕಳೆದ ಹದಿನೈದು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಸದನ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸದನವನ್ನು ಮೊಟಕುಗೊಳಿಸುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದೇ ಸದನದ ಮೂಲವಾಗಿದೆ ಎಂದರು.
ಎಲ್ಲರೂ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾವನ್ನು ನೋಡಬಹುದು. ಕಾಶ್ಮೀರದಲ್ಲಿ ನಡೆದ ಸತ್ಯಾಂಶವನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ 'Y' ಶ್ರೇಣಿಯ ಭದ್ರತೆ: ಸಿಎಂ