ಮೈಸೂರು: ರೌಡಿಶೀಟರ್ ಜೊತೆ ಔತಣಕೂಟದಲ್ಲಿ ಭಾಗಿಯಾಗಿದ್ದ ಸಬ್ ಇನ್ಸ್ಪೆಕ್ಟರ್ ಪಿ.ಲೋಕೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಮಾನತುಗೊಳಿಸಿದ್ದಾರೆ.

ಕರ್ತವ್ಯಲೋಪ ಆರೋಪದ ಮೇಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಪಿ.ಲೋಕೇಶ್ ಅವರನ್ನು ಅಮಾನತು ಮಾಡಲಾಗಿದೆ. ಎಸ್‌ಐ ಲೋಕೇಶ್ ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಬಳಿ ಗೆಸ್ಟ್ ಹೌಸ್‌ನಲ್ಲಿ ರೌಡಿಶೀಟರ್ ಜೊತೆ ಔತಣ ಕೂಟದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇದರ ಫೋಟೋ ಸಮೇತ ಪಿರಿಯಾಪಟ್ಟಣದ ನಿವಾಸಿ ಅಣ್ಣಯ್ಯ ಎಂಬುವರು ಡಿವೈಎಸ್ಪಿ ಸುಂದರ್ ರಾಜ್ ಅವರಿಗೆ ದೂರು ನೀಡಿದ್ದರು.
ಈ ಕುರಿತು ಡಿವೈಎಸ್ಪಿ ಸುಂದರ್ ರಾಜ್ ವಿಚಾರಣೆ ನಡೆಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.