ಮೈಸೂರು : ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಮುಂದಿನ 15 ದಿನಗಳಲ್ಲಿ ಸರಿಪಡಿಸುತ್ತೇವೆ. ಜೊತೆಗೆ ಆರು ತಿಂಗಳ ಒಳಗೆ ಯಾವುದೇ ಸಮಸ್ಯೆ ಇಲ್ಲದಂತೆ ಹೈವೇಯನ್ನು ಸುಸಜ್ಜಿತವಾಗಿ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು - ಮೈಸೂರು ಹೈವೇಯಲ್ಲಿ ಅಪಘಾತಗಳು ಸಂಭವಿಸಲು ಅತಿ ವೇಗ ಕಾರಣ ಎಂದು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ನಾನು ಮೊದಲೇ ಹೇಳಿದ್ದೇನೆ. ಕೆಲ ವಾಹನ ಸವಾರರು ಹೈವೇಗೆ ಇಳಿಯುತ್ತಿದ್ದಂತೆ ಅತಿವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಮತ್ತೆ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಅಪಘಾತ ಆಗುತ್ತಿವೆ ಎಂದು ದೂರುತ್ತಾರೆ. ರಸ್ತೆಯನ್ನು ವೈಜ್ಞಾನಿಕವಾಗಿಯೇ ನಿರ್ಮಿಸಲಾಗಿದೆ ಎಂದು ಹೇಳಿದರು.
ಹೈವೇಯಲ್ಲಿ ನಿಯಮಿತ ವೇಗದಲ್ಲಿ ವಾಹನ ಚಲಾಯಿಸಿದರೆ ಅಪಘಾತ ಉಂಟಾಗುವುದಿಲ್ಲ. ಇದರ ನಡುವೆಯೂ ಹೈವೇಯಲ್ಲಿ ಏನಾದರೂ ಸಣ್ಣಪುಟ್ಟ ದೋಷಗಳಿದ್ದರೆ ಸಮಸ್ಯೆಗಳು ಇಲ್ಲದಂತೆ ಹೈವೇಯನ್ನು ಸುಸಜ್ಜಿತಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಬರಗಾಲ ಉಂಟಾದರೆ ನಿಭಾಯಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿರಬೇಕು : ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲೇ ಕೈಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತಗೊಂಡಿದೆ. ಕೊಡಗಿನಲ್ಲಿ ಮಳೆಯಾಗದ ಕಾರಣ ಕೆಆರ್ಎಸ್ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಇದರಿಂದಾಗಿ ಬೆಂಗಳೂರು, ಮೈಸೂರಿನಂತಹ ಮಹಾನಗರಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದೆ ಎದುರಾಗುವ ಬರಗಾಲ ಎದುರಿಸಲು ಸರ್ಕಾರ ಸನ್ನದ್ಧವಾಗಬೇಕು ಎಂದು ಹೇಳಿದರು.
ತಮಿಳುನಾಡಿಗೆ ಜೂನ್, ಜುಲೈ ತಿಂಗಳ ಕೋಟಾ ಪ್ರಕಾರ ನೀರು ಬಿಡಲಾಗುವುದಿಲ್ಲ ಎಂದು ಕಾವೇರಿ ನ್ಯಾಯ ಮಂಡಳಿಗೆ ವಾಸ್ತವ ಪರಿಸ್ಥಿತಿಯನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಮೊದಲೇ ಪ್ರಮಾಣಪತ್ರ ಸಲ್ಲಿಸಬೇಕು. ತಮಿಳುನಾಡು ತಗಾದೆ ತೆಗೆದರೆ, ತಮಿಳರು-ಕನ್ನಡಿಗರು ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಮನವಿ ಮಾಡಿಕೊಳ್ಳಿ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿ ಎಂದಿಗೂ ಕರ್ನಾಟಕದ ಪರವಿದೆ ಎಂದು ತಿಳಿಸಿದರು.
ತಮಿಳುನಾಡಿಗೆ ಹರಿಸುತ್ತಿದ್ದ 195 ಟಿಎಂಸಿ ನೀರಿನ ಬದಲು 171 ಟಿಎಂಸಿಗೆ ಇಳಿಸಿದ್ದು ಬಿಜೆಪಿ ಸರ್ಕಾರ. ರಾಜ್ಯದಲ್ಲಿ ಬಿತ್ತನೆ ಬೀಜ ರಸಗೊಬ್ಬರದ ಕೊರತೆಯಾಗಿಲ್ಲ. ಕೊಡಗಿನಲ್ಲಿ ಯೂರಿಯಾಗೆ ಹೆಚ್ಚು ಬೇಡಿಕೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಾವಯವ ಗೊಬ್ಬರದ ಬಳಕೆಗೆ ಆದ್ಯತೆ ನೀಡಿದ್ದಾರೆ. ರೈತರು ಕೂಡ ಸಾವಯವ ಗೊಬ್ಬರದ ಬಳಕೆಗೆ ಮುಂದಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.
ಕಾಮಗಾರಿಗಳ ಅನುದಾನ ತಡೆಯುವುದು ಸರಿಯಲ್ಲ : ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಕಾಡಂಚಿನ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಅನುದಾನ ಮೀಸಲಿಡಬೇಕು. ಕಾಡುಪ್ರಾಣಿಗಳ ಹಾವಳಿ ತಡೆಗೆ ರೈಲ್ವೆ ಕಂಬಿ ಅಳವಡಿಕೆಗೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಈಗಾಗಲೇ ಪ್ರಗತಿಯಲ್ಲಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ತಡೆಹಿಡಿದಿರುವುದು ಸರಿಯಲ್ಲ ಎಂದರು.
ನೀವು ಯಾವುದೇ ರೀತಿಯ ತನಿಖೆಯನ್ನು ಮಾಡಿಕೊಳ್ಳಿ. ಆದರೆ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಅನುದಾನ ತಡೆ ಹಿಡಿಯಬೇಡಿ. ಮೈಸೂರಿನ ರಿಂಗ್ ರಸ್ತೆಯ ಕಾಮಗಾರಿಯ 12 ಕೋಟಿ ಹಣದ ಪೈಕಿ 6 ಕೋಟಿ ನೀಡಿ, ಇನ್ನುಳಿದ 6 ಕೋಟಿ ತಡೆಹಿಡಿದಿದ್ದೀರಿ. ಪರಿಣಾಮ ರಿಂಗ್ ರಸ್ತೆ ಮತ್ತೆ ಕತ್ತಲಾಗಿದೆ. ನೀವು ಯಾವುದೇ ತನಿಖೆ ಮಾಡಿಸಿ, ಆದರೆ ಅಭಿವೃದ್ಧಿ ಕಾಮಗಾರಿಯ ಅನುದಾನ ತಡೆ ಹಿಡಿಯಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ರೇಸಿಂಗ್ ಟ್ರ್ಯಾಕ್ ಅಲ್ಲ; ಅಪಘಾತಗಳಿಗೆ ಚಾಲಕರ ಬೇಜವಾಬ್ದಾರಿ ಕಾರಣ- ಪ್ರತಾಪ್ ಸಿಂಹ