ಮೈಸೂರು: ಈ ಬಾರಿಯೂ ಜನ ಪರವಾದ ಬಜೆಟ್ ನೀಡಲು ಮುಂದಾಗಿದ್ದೇವೆ. ಎಲ್ಲ ಜಿಲ್ಲೆಗಳಿಗೂ ಪ್ರತಿನಿತ್ಯ ನೀಡಲು ಜನ ಪರವಾಗಿ ಸರ್ವ ವರ್ಗದ ಜನರಿಗೂ ನ್ಯಾಯ ಒದಗಿಸಲು ಮುಂದಾಗಿದ್ದೇವೆ. ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡಿಸಲು ಸಜ್ಜಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಟ ವಿಷ್ಣುವರ್ಧನ್ ಅವರು ಮೇರು ನಟನಾಗಿದ್ದರು. ಹಲವಾರು ಭಾಷೆಗಳಲ್ಲಿ ನಟಿಸಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮದೇ ಆದ ಕಲಾ ಸೇವೆ ಸಲ್ಲಿಸಿದ್ದಾರೆ. ಅವರ ಕುಟುಂಬದ ನಿರ್ಧಾರದಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಈಗಾಗಲೇ 11 ಕೋಟಿ ರೂ.ಗಳಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದರ ಜೊತೆಗೆ ಚಿತ್ರರಂಗಕ್ಕೆ ಆಗಮಿಸುವವವರಿಗೆ ಇಲ್ಲಿ ಅಭ್ಯಾಸ ಮಾಡುವ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು.
ಬಿಸಿಸಿ ಮಾಡಿರುವ ಸಾಕ್ಷ್ಯ ಚಿತ್ರದ ಕುರಿತು ಸಿದ್ದರಾಮಯ್ಯ ಮಾಡಿರುವ ಟ್ವಿಟ್ ಬಗ್ಗೆ ಮಾಧ್ಯಮದವರು ಕೇಳಿದಾಗ, ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರ ಒಬ್ಬ ವ್ಯಕ್ತಿಯ ಕುರಿತಾಗಿ ಅಲ್ಲ, ಅದು ದೇಶದ ಇತಿಹಾಸವನ್ನೇ ತಿರುಚುವ ಕಾರ್ಯದಂತಿದೆ. ಅದಕ್ಕೆ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದೇಶದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಆದರೆ ಸಿದ್ದರಾಮಯ್ಯ ಅವರಿಗೆ ಆ ಗುಣ ಇಲ್ಲ, ಏನು ಮಾಡಲಿಕ್ಕಾಗುವುದಿಲ್ಲ ಎಂದು ಹೇಳಿದರು.
ಕಾಗಿನೆಲೆ ಶ್ರೀಗಳು ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಕ್ ಕಿತ್ತುಕೊಂಡಿದ್ದು ಬಹಳ ನೋವಾಗಿದೆ. ಮುಖ್ಯಮಂತ್ರಿ ಅವರ ಈ ವರ್ತನೆ ಸರಿಯಲ್ಲ. ಯಾವುದಾದರೂ ದೊಡ್ಡ ಸಮುದಾಯದ ಮಠದ ಶ್ರೀಗಳ ಬಳಿ ಈ ರೀತಿ ಮೈಕ್ ಕಿತ್ತುಕೊಂಡಿದ್ದರೆ ಬಿಡುತ್ತಿದ್ದರೇ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾಡಿದ್ದ ಆರೋಪಕ್ಕೆ ಉತ್ತರಿದ ಸಿಎಂ, ಕಾಗಿನೆಲೆ ಶ್ರೀ ನಮ್ಮ ಗುರುಗಳು. ಮೈಕ್ ಕಿತ್ತುಕೊಂಡದ್ದು ಪ್ರಶ್ನೆಯೇ ಇಲ್ಲ. ಶ್ರೀಗಳು ಮತ್ತು ನಮ್ಮ ನಡುವಿನ ಮಾತುಕತೆ ವಿಶ್ವನಾಥ್ ಅವರಿಗೆ ಗೊತ್ತಿಲ್ಲ ಎಂದು ಉತ್ತರಿಸಿದರು.
ಚುನಾವಣೆ ಪೂರಕ ಬಜೆಟ್: ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸರ್ಕಾರ ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆ ರೂಪಿಸಿದೆ. ರೈತರು, ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಒಂದು ಲಕ್ಷ ನೀಡಿ, ಬ್ಯಾಂಕ್ ಜೋಡಿಸಿ ಅವರನ್ನು ಸ್ವಾವಲಂಬಿಯಾಗಿಸಲು ಎಂಡ್ ಟು ಎಂಡ್ ಅಪ್ರೋಚ್ ಇರುವ ಕಾರ್ಯಕ್ರಮಗಳು ಹಾಗೂ ಸ್ತ್ರೀ ಸಾಮರ್ಥ್ಯ ಯೋಜನೆ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲು ಈ ಬಜೆಟ್ನಲ್ಲಿ ನೀಲಿ ನಕ್ಷೆ ಸಿದ್ಧವಾಗಿದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಫೆಬ್ರವರಿ 17ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಸಂಬಂಧ ಜನವರಿ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಫೆಬ್ರವರಿ 10 ರಿಂದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ಆರಂಭಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿ 10ಕ್ಕೆ ಆರಂಭವಾಗಲಿರುವ ಜಂಟಿ ಅಧಿವೇಶನ ಉದ್ದೇಶಿಸಿ, ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: 'ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ, ಗೆಲುವು ನಮ್ಮದೇ': ಸಿಎಂ ಬೊಮ್ಮಾಯಿ