ಮೈಸೂರು: ಬಸವರಾಜ ಬೊಮ್ಮಾಯಿ ಯೋಗದಿಂದ ಮುಖ್ಯಮಂತ್ರಿಯಾದವರು. ಯೋಗ್ಯತೆಯಿಂದಲ್ಲ. ಯೋಗದಿಂದ ಬಂದಿದ್ದು ಕ್ಷಣಿಕ, ಯೋಗ್ಯತೆಯಿಂದ ಬಂದಿದ್ದು ಶಾಶ್ವತ. ನೆನಪಿರಲಿ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಿಎಂ ತಾಕತ್ತು, ಧಮ್ ಎನ್ನುವ ಪದ ಬಳಸಿದ್ದಾರೆ. ಜನೋತ್ಸವ ಎಂಬುದು ಜನಸ್ಪಂದನ ಕಾರ್ಯಕ್ರಮ ಎಂದು ಬದಲಾಯಿಸಿದ್ದೇಕೆ ಎಂದು ಎಂದು ಪ್ರಶ್ನಿಸಿದರು.
ಹೆಸರಿಗೆ ಮಾತ್ರ ಜನಸ್ಪಂದನ. ಆದರೆ, ಇದು ಮೋಜಿನ ಕಾರ್ಯಕ್ರಮ. ವಿರೋಧ ಪಕ್ಷವನ್ನು ಟೀಕಿಸುವ ಕಾರ್ಯಕ್ರಮವಾಗಿತ್ತು. ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಜವಾಬ್ದಾರಿಯುತವಾಗಿ ಮಾತನಾಡಿಲ್ಲ. ಭ್ರಷ್ಟಾಚಾರದ ಬಗ್ಗೆ ನಮ್ಮನ್ನು ಟೀಕಿಸುವ ಮೊದಲು ನಿಮಗೆ ಧೈರ್ಯವಿದ್ದರೆ ಈ ಹಿಂದೆಯೇ ಪ್ರಶ್ನಿಸಬಹುದಿತ್ತು. ಕೇಂದ್ರ ಸರ್ಕಾರ ನಿಮ್ಮದಾಗಿತ್ತು. ಎಲ್ಲ ಇಲಾಖೆಗಳು ನಿಮ್ಮ ಬಳಿಯೇ ಇದ್ದವು. ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಡಬಲ್ ಇಂಜಿನ್ ಸರ್ಕಾರ ಯಾಕೆ ತನಿಖೆಗೆ ಆದೇಶ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.
ಪ್ರವಾಹಕ್ಕೆ ತುತ್ತಾದ ಜನರು ಸಂಕಷ್ಟದಲ್ಲಿದ್ದಾರೆ. ಪ್ರವಾಹದಂತ ವೇಳೆ ಈ ರೀತಿಯ ಜನಸ್ಪಂದನ ಕಾರ್ಯಕ್ರಮ ಬೇಕಿರಲಿಲ್ಲ. ನಿಮ್ಮ ಸಾಧನೆ ಹೇಳುವ ಕಾರ್ಯಕ್ರಮವಾಗಬೇಕಿತ್ತು. ಕಾಂಗ್ರೆಸ್ ಮೇಲೆ ಭಯ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಗುರಿಯಾಗಿಸಿಕೊಂಡು ಕಾರ್ಯಕ್ರಮ ನಡೆಸಿದ್ದೀರಿ ಎಂದು ಧ್ರುವನಾರಾಯಣ್ ಕಿಡಿಕಾರಿದರು.
ಸಚಿವರ ನಿಧನದಿಂದ ಶೋಕಾಚರಣೆ ಇರುವಾಗ ಹಾಗೂ ರಾಜ್ಯದಲ್ಲಿ ಪ್ರವಾಹದಿಂದ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ಸಚಿವರು ಹಾಗೂ ಮುಖಂಡರು ಡ್ಯಾನ್ಸ್ ಮಾಡುವುದು ಶೋಚನಿಯ. ಮುಂದಿನ ಚುನಾವಣೆ ಯಡಿಯೂರಪ್ಪ ಸಾರಥ್ಯ, ಬೊಮ್ಮಾಯಿ ನೇತೃತ್ವ ಎಂದು ಹೇಳುವ ನಳಿನ್ ಕುಮಾರ್, ಹಾಗಾದರೆ ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಾತ್ರ ಏನು?. ಭಜನಾ ಮಂಡಳಿ ಅಧ್ಯಕ್ಷರಾಗಲು ನಳಿನ್ ಕುಮಾರ್ ಕಟೀಲ್ ಸರಿಯಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಬಂದಿದೆ ಎಂದರು.
ಇದನ್ನೂ ಓದಿ: ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಗೆ ಸಿಎಂ ಸವಾಲು