ಮೈಸೂರು : ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2021 ಡಿಸೆಂಬರ್ 10 ರಿಂದ 19ರವರೆಗೆ ನಡೆಯಲಿದೆ. ನಾಟಕೋತ್ಸವದ ವಸ್ತು ವಿಷಯ, ಪ್ರದರ್ಶನಗೊಳ್ಳುವ ನಾಟಕಗಳು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಇತರ ಕಲಾಪ್ರಕಾರಗಳ ಕುರಿತು 'ಈಟಿವಿ ಭಾರತ್'ನೊಂದಿಗೆ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.
ರಂಗಾಯಣ ಆವರಣದಲ್ಲಿ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 10ರಂದು ಚಪ್ಪರ ಕಾರ್ಯಕ್ರಮ ಆಯೋಜಿಸಲಾಗಿದೆ. ಚಪ್ಪರ ಎಂದರೆ ಉದ್ಘಾಟನೆ. ಅಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಆಗಮಿಸಲಿದ್ದಾರೆ. ಡಿಸೆಂಬರ್ 11ರಂದು ನಾಟಕೋತ್ಸವವನ್ನು ಪದ್ಮಶ್ರೀ ಪುರಸ್ಕೃತ ವೃಕ್ಷ ಮಾತೆ ತುಳಸಿಗೌಡ ಉದ್ಘಾಟಿಸಲಿದ್ದಾರೆ.
ಚಿತ್ರನಟಿ ಮಾಳವಿಕ ಅವಿನಾಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೊರೊನಾ ಕಾರಣದಿಂದಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನಾಟಕ ಹಬ್ಬವನ್ನು ಮಾಡುತ್ತಿದ್ದೇವೆ. 22 ಕನ್ನಡ ನಾಟಕ, 14 ಪಂಜಾಬಿ, ಗುಜರಾತಿ ಸೇರಿದಂತೆ ಇತರ ಭಾಷೆಗಳ ನಾಟಕಗಳು, ಇಂಗ್ಲಿಷ್ ನಾಟಕಗಳು ಪ್ರದರ್ಶನಗೊಳ್ಳಲಿವೆ. ಕನ್ನಡದ ಸಹೋದರ ಭಾಷೆಗಳಾದ ಕೊಂಕಣಿ ಮತ್ತು ತುಳು ಭಾಷೆಯ ನಾಟಕಗಳು ಇರಲಿವೆ.
ರಂಗ ಪ್ರಕಾರದಲ್ಲಿ ಇನ್ನೊಂದು ಮುಖವಾದ ಯಕ್ಷಗಾನ, ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ, ಸಲಾಕೆ ಗೊಂಬೆಯಾಟ, ಇದೆಲ್ಲವೂ ಇರಲಿವೆ. ವೃತ್ತಿ ರಂಗಭೂಮಿ, ಪೌರಾಣಿಕ ರಂಗಭೂಮಿ ಅವರಿಗೂ ಅವಕಾಶ ನೀಡಲಾಗಿದೆ. ಸುಮಾರು 37 ರಂಗ ಪ್ರದರ್ಶನಗಳು ಆಗಲಿದೆ ಎಂದು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ವಿಚಾರ ಸಂಕಿರಣ : ಬಹುರೂಪಿ ವಿಶೇಷತೆ ಎಂದರೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಇದರಲ್ಲಿ ತಾಯಿ ಬಗ್ಗೆ ಇರುವ ಅನೇಕ ಚಿತ್ರಗಳು ಇರಲಿವೆ. ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸುವ ಉದ್ದೇಶದಿಂದ ರಾಜಕುಮಾರ ಹಾಗೂ ಡಾ.ರಾಜ್ ಕುಮಾರ್ ತಾಯಿ ಬಗ್ಗೆ ಮಾಡಿರುವ ಚಿತ್ರಗಳು ಹಾಗೂ ದೇಶದ ಮತ್ತು ಹೊರ ದೇಶದ ತಾಯಿ ಬಗೆಗಿನ ಚಿತ್ರಗಳು, ಕೊಡವ ಭಾಷೆಯಲ್ಲಿರುವ ಕಾವೇರಿ ತಾಯಿ ಬಗೆಗಿನ ಕಿರು ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ತಾಯಿ ಹಾಗೂ ತಾಯ್ತನ ಬಹುರೂಪಿಯ ವಸ್ತು ವಿಷಯ : ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಪರಂಪರೆಯಂತೆ ನಡೆಯಲಿದೆ. ತಾಯಿ ಹಾಗೂ ತಾಯ್ತನ ಎಂಬ ವಸ್ತು ವಿಷಯ ಇಟ್ಟುಕೊಂಡಿದ್ದು, ತಾಯಿ ಎಂದರೆ ಜಮೀನು, ಜಂಗಲ್, ಜಾನುವಾರು, ಜನ, ಜಲ ಈ ಐದು ಸೂತ್ರಗಳ ಅಡಿಯಲ್ಲಿ ತಾಯಿಯನ್ನು ನೋಡುತ್ತೇವೆ. ದೇಶವನ್ನು ತಾಯಿ ಎಂದು ಹೇಳುತ್ತೇವೆ. ನಮ್ಮ ನಾಡನ್ನು ಭುವನೇಶ್ವರಿ ತಾಯಿ ಎಂದು ಹೇಳುತ್ತೇವೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
ಇದನ್ನೂ ಓದಿ: ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ; ನಾನು 'ಪವರ್‌ಫುಲ್' ಮಹಿಳೆ ಎಂದ ನಟಿ