ಮೈಸೂರು: ರಾಜ್ಯದ ರೈತರಿಗೆ ನೆರವಾಗಲಿ ಎಂದು ರೈತರು ಬೆಳೆಯುವ ಎಲ್ಲಾ ಬೆಳೆಗಳು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ. ಸಿ ಪಾಟೀಲ್ ಅವರು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸ್ಟಾರ್ಟ್ ಅಪ್ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಸಂಸ್ಕರಣ ಘಟಕಗಳು ತೆರೆದು ರೈತರು ತಾವು ಬೆಳೆದ ಬೆಳೆಯನ್ನು ತಾವೇ ಸಂಸ್ಕರಿಸಿ, ತಾವೇ ಬ್ರ್ಯಾಂಡ್ ಮಾಡಿ, ತಾವೇ ರಫ್ತು ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಯಾವುದೇ ರೀತಿಯ ಮಧ್ಯವರ್ತಿ ಇಲ್ಲದೇ ಈ ಯೋಜನೆಯಿಂದ ತಾವು ಬೆಳೆದ ಬೆಳೆಗೆ ಉತ್ತಮ ಬೆಂಬಲ ಪಡೆಯಬಹುದಾಗಿದೆ. ನಮ್ಮ ರೈತರ ಬೆಳೆ ಹೊರದೇಶಕ್ಕೆ ರಫ್ತು ಆಗಬೇಕೆಂಬ ಹಿನ್ನಲೆ ಈಗಾಗಲೇ ಅಪೇಡಾ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗಿದೆ. ರಾಜ್ಯದ ಬೀಜ ನಿಗಮ ಹಾಗೂ ಕೆಫೆಕ್ಸ್ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಸ್ಕರಣ ಘಟಕಗಳನ್ನು ತೆರೆಯಲು ಮುಂದಾಗಿದ್ದೇವೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಕಾನೂನು ಕ್ರಮ ಕೈಗೊಳ್ಳಲಾಗುವುದು: ಅಪೇಡಾ ಅವರು ವರದಿ ನೀಡುತ್ತಿದ್ದಂತೆ ಈ ಯೋಜನೆಗೆ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರ ಹಾಗೂ ಬೀಜಗಳ ಕೊರತೆ ಇಲ್ಲ. ರಾಜ್ಯದ ಹಲವೆಡೆ ಪೂರ್ವ ಮುಂಗಾರು ಆಗಮಿಸುವ ಹಿನ್ನಲೆ ಎಲ್ಲ ಜಿಲ್ಲೆಗಳಿಗೆ ಬೇಕಾಗುವ ರಸಗೊಬ್ಬರ ಹಾಗೂ ಬೀಜ ದಾಸ್ತಾನುಗಳನ್ನು ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯದ 14 ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಓದಿ: ಬಿಬಿಎಂಪಿ ವಾರ್ಡ್ ಮರು ವಿಂಡಗಣೆ ಸಂಬಂಧ ಕೇವಲ 107 ಆಕ್ಷೇಪಣೆ ಮಾತ್ರ ಬಂದಿದೆ: ಪಾಲಿಕೆ ವಿಶೇಷ ಆಯುಕ್ತ ದೀಪಕ್ ಕುಮಾರ್