ಮೈಸೂರು: ಮನೆಗೊಬ್ಬ ಸೈನಿಕ ಜನಿಸಿದ ಕೊಡಗಿನಲ್ಲಿ ಈಗ ಮನೆಗೊಬ್ಬ ಪುಂಡರನ್ನು ಬಿಜೆಪಿ ಹುಟ್ಟು ಹಾಕುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದೃವ ನಾರಾಯಣ್ ಆರೋಪ ಮಾಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವ ನಾರಾಯಣ್ ಹಾಗೂ ಸಿದ್ದರಾಮಯ್ಯ ಮಗ ಶಾಸಕ ಡಾ. ಯತೀಂದ್ರ ನಿನ್ನೆಯ ಕೊಡಗಿನಲ್ಲಿ ಆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದರು.
ಬಿಜೆಪಿ ವಿರುದ್ಧ ಧ್ರುವ ನಾರಾಯಣ್ ಆರೋಪ: ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳೆಹಾನಿ ಸಂಬಂಧ ಪ್ರವಾಸ ಮಾಡಿದ್ದರು. ನಿನ್ನೆ ಕೊಡಗು ಜಿಲ್ಲೆಯಲ್ಲಿ ನಡೆದ ಘಟನೆ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ದಾಳಿಯ ಬಗ್ಗೆ ಮಾಹಿತಿ ಇದ್ದರು ತಡೆಯುವಲ್ಲಿ ಸರ್ಕಾರ ವಿಫಲವಾಗಿದ್ದು, ರಾಜ್ಯದ ಗೃಹ ಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಆಗ್ರಹಿಸಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯಪಾಲರು ಕೊಡಗು ಜಿಲ್ಲೆಯ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಬೇಕು. ಕೊಡಗು ವೀರರ ನಾಡು. ದೇಶ ರಕ್ಷಣೆಗೆ ಮನೆಗೊಬ್ಬ ಸೈನಿಕರಿದ್ದು, ನಿನ್ನೆಯ ಘಟನೆ ವೀರ ಸಂಸ್ಕೃತಿಗೆ ತಲೆ ತಗ್ಗಿಸುವ ಕೆಲಸವನ್ನು ಬಿಜೆಪಿ ಪುಂಡರು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಧ್ರುವ ನಾರಾಯಣ್ ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮನೆಗೊಬ್ಬ ಸೈನಿಕ ಜನಿಸಿದ ಕೊಡಗಿನಲ್ಲಿ, ಮನೆಗೊಬ್ಬ ಪುಂಡರನ್ನು ಬಿಜೆಪಿ ಹುಟ್ಟು ಹಾಕುತ್ತಿದೆ. ಈ ಘಟನೆಯನ್ನು ಖಂಡಿಸಿ ಆಗಸ್ಟ್ 26ಕ್ಕೆ ಮಡಿಕೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ
ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ: ನಿನ್ನೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದೊಂದು ಹೇಡಿಗಳ ಕೃತ್ಯ, ಸೈದ್ಧಾಂತಿಕವಾಗಿ ಗಟ್ಟಿತನ ಇಲ್ಲ. ಬಿಜೆಪಿಗರು ಹಿಂಸಾಚಾರಕ್ಕೆ ಇಳಿದಿದ್ದಾರೆ. ಯಾರಲ್ಲಿ ಸೈದ್ಧಾಂತಿಕವಾಗಿ ಗಟ್ಟಿತನ ಇಲ್ಲವೋ.. ಅಲ್ಲಿ ಹಿಂಸಾಚಾರವಾಗುತ್ತದೆ. ಇದನ್ನು ಬಿಜೆಪಿಗರು ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಬ್ಬ ವಿರೋಧ ಪಕ್ಷದ ನಾಯಕನಿಗೆ ರಕ್ಷಣೆ ಇಲ್ಲ ಎಂದರೇ ಜನ ಸಾಮಾನ್ಯರಿಗೆ ಹೇಗೆ ರಕ್ಷಣೆ ಸಿಗಲು ಸಾಧ್ಯ. ಹೋರಾಟದ ಹಾಗೂ ಹಿಂದುಳಿದ ವರ್ಗದ ಧ್ವನಿಯಾಗಿರುವ ಸಿದ್ದರಾಮಯ್ಯ ಇಂತಹ ಘಟನೆಗಳಿಗೆ ಹೆದರುವುದಿಲ್ಲ. ಸರ್ಕಾರ ತನ್ನ ವೈಫಲ್ಯಗಳನ್ನು ಮರೆ ಮಾಚಲು ಇಂತಹ ಕೆಲಸಕ್ಕೆ ಇಳಿದಿದೆ. ಇದು ಖಂಡನೀಯ ಹಾಗೂ ಹೇಡಿಗಳ ಕೃತ್ಯ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗುರುವಾರದಂದು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಹಿ ಅನುಭವ ಆಗಿದೆ. ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದರು. ಇನ್ನೊಂದೆಡೆ, ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿದೆ. ಎರಡೂ ಕಡೆಯವರಿಂದಲೂ ಘೋಷಣೆಗಳು ಮೊಳಗಿದ್ದು ತಿಮ್ಮಯ್ಯ ಸರ್ಕಲ್‌ನಲ್ಲಿ ಹೈಡ್ರಾಮವೇ ಜರುಗಿತು.
ಓದಿ: ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ.. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಿಯಂತ್ರಿಸಲು ಪೊಲೀಸರ ಹರಸಾಹಸ