ಮೈಸೂರು: ಖದೀಮನೋರ್ವ ಮಹಿಳೆ ಒಬ್ಬಳೇ ಮನೆಯಲ್ಲಿರುವುದನ್ನು ಗಮನಿಸಿ, ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಪರಿಸರ ನಗರದಲ್ಲಿ ನಡೆದಿದೆ.
ಪರಿಸರನಗರದ ನಿವಾಸಿಯಾದ ಆಶಾ (ಲಲಿತಾ) ಎಂಬುವವರೇ ಹಲ್ಲೆಗೊಳಗಾದ ಮಹಿಳೆ. ಅದೇ ನಗರದ ದಿನಸಿ ಹಾಗೂ ಫ್ಲೋರ್ ಮಿಲ್ ಅಂಗಡಿ ನಡೆಸುತ್ತಿದ್ದ ಮಲ್ಲಿಕಾರ್ಜುನ್ ಹಲ್ಲೆ ಮಾಡಿರುವ ಆರೋಪಿ.
ಘಟನೆಯ ವಿವರ:
ಆರೋಪಿ ತನ್ನ ಅಂಗಡಿ ಹಿಂಭಾಗದ ಮನೆಯ ಪರಿಚಯಸ್ಥರಾದ ಆಶಾ ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇರುವ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದು , ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾನೆ. ನೀರು ತಂದು ಕೊಟ್ಟ ನಂತರ ಸ್ವಲ್ಪ ಉಪ್ಪು ನೀಡುವಂತೆ ಕೇಳಿದ್ದು, ಆಕೆ ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಮುಖವನ್ನು ನೆಲಕ್ಕೆ ಜಜ್ಜಿದ್ದು, ದಾರದಿಂದ ಕತ್ತು ಬಿಗಿದು ಕೊಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆಶಾ ಜೋರಾಗಿ ಕೂಗಿಕೊಂಡಾಗ ತಕ್ಷಣ ಸಲೀಂ ಎಂಬಾತ ಸಹಾಯಕ್ಕೆ ಬಂದಿದ್ದು, ಆರೋಪಿ ತಪ್ಪಿಸಿಕೊಳ್ಳಬಾರದೆಂದು ಹಿಂಬಾಗಿಲ ಚಿಲಕ ಹಾಕಿದ್ದ. ತಕ್ಷಣ ಸಾರ್ವಜನಿಕರೆಲ್ಲ ಸೇರಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಮೈಸೂರಿಗೆ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಆರೋಪಿ ಮಲ್ಲಿಕಾರ್ಜುನ ಆಶಾ ಅವರ ಕೊಲೆಗೆ ಯತ್ನಿಸಿದ್ದೇಕೆ ಎಂಬ ಮಾಹಿತಿ ಪೊಲೀಸರ ತನಿಖೆ ಬಳಿಕ ಹೊರಬೀಳಲಿದೆ.