ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ಪಿಎಫ್ಐ ಹಾಗೂ ಎಸ್ಡಿಪಿಐನಲ್ಲಿ ಕೆಲಸ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು 2 ದಿನಗಳಲ್ಲಿ ತನಿಖೆ ಮುಕ್ತಾಯವಾಗಲಿದ್ದು, ಬಳಿಕ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತಾನಾಡಿದ ಬಸವರಾಜ್ ಬೊಮ್ಮಾಯಿ, ತನ್ವೀರ್ ಸೇಠ್ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ವಾರ್ಡ್ಗೆ ಶಿಫ್ಟ್ ಆಗಲಿದ್ದಾರೆ. ಈ ರೀತಿಯ ಘಟನೆಗಳು ಆಗುವುದು ವಿರಳ. ಆದ ಮೇಲೆ ನಾವು ಜಾಗೃತರಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರಿಗೂ ರಕ್ಷಣೆ ಕೊಡುವ ಕೆಲಸ ಇನ್ನು ಮುಂದೆ ನಡೆಯುತ್ತದೆ. ಇನ್ನ 2 ದಿನಗಳಲ್ಲಿ ತನಿಖೆ ಮುಕ್ತಾಯಗೊಳ್ಳಲಿದ್ದು, ಮೇಲ್ನೋಟಕ್ಕೆ ಈ ಹಲ್ಲೆ ಸಂಘಟನೆಯವರು ಐಡಿಯಾಲಜಿ ಮತ್ತು ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ನಡೆಸಿರಬಹುದೆಂದು ಹೇಳಬಹುದು. ಆದರೆ ತನಿಖೆಯ ನಂತರ ಅದು ಗೊತ್ತಾಗಲಿದೆ ಎಂದರು.
ಆರೋಪಿ ವ್ಯಕ್ತಿ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತ ಎಂದು ತಿಳಿದುಬಂದಿದ್ದು, ಕ್ಯಾತಮರನಹಳ್ಳಿ ರಾಜು ಹತ್ಯೆ ಮತ್ತು ಬೆಂಗಳೂರಿನ ಕೆಲವು ಕಡೆ ನಡೆದ ಹತ್ಯೆಗಳನ್ನು ನೋಡಿದರೆ ಒಂದೇ ರೀತಿ ಇವೆ. ಆದ್ದರಿಂದ ಇಲ್ಲಿ ನಡೆದ ಘಟನೆ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೂ ಲಿಂಕ್ ಇದೆಯಾ ಎಂದು ಪೋಲಿಸರು ತನಿಖೆ ನಡೆಸುತ್ತಿದ್ದಾರೆಂದು ಗೃಹ ಸಚಿವರು ಹೇಳಿದ್ದಾರೆ.