ಮೈಸೂರು: ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ಪಿ.ಕೆ. ,ಮಿಶ್ರಾ ಅವರನ್ನ ವರ್ಗಾವಣೆ ಮಾಡಿ ಹೊರಡಿಸಲಾದ ಆದೇಶ ರದ್ದು ಮಾಡಬೇಕೆಂದು, ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘ, ಮೈಸೂರು ಶಾಖೆ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರಿಗೆ ಮನವಿ ಮಾಡಿದೆ.
ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ಮೂಲಕ ಪ್ರಾದೇಶಿಕ ಕಚೇರಿಗೆ ಕಪ್ಪುಪಟ್ಟಿ ಧರಿಸಿ ಆಗಮಿಸಿದ ಜಿಲ್ಲೆಯ ಪಿಡಿಒಗಳು, ಪಂಚಾಯತ್ ರಾಜ್ ಸಿಬ್ಬಂದಿ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಪಿ.ಕೆ.ಮಿಶ್ರಾ ಅವರ ವರ್ಗಾವಣೆ ಕೂಡಲೇ ರದ್ದುಗೊಳಿಸಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು, ರಾಜ್ಯ ಸರ್ಕಾರದಿಂದ ತನಿಖೆಗೆ ಇನ್ನೂ ಆದೇಶ ನೀಡಿಲ್ಲ. ಇಂದು ಸಂಜೆಯೊಳಗೆ ಆದೇಶ ಬರುವ ನಿರೀಕ್ಷೆ ಇದೆ. ಮೌಖಿಕವಾಗಿಯೂ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ಕೂಡಲೇ ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಮೈಸೂರು ಶಾಖೆಯ ಅಧ್ಯಕ್ಷ ಎಂ.ಡಿ.ಮಾಯಪ್ಪ ಮಾತನಾಡಿ, ಪಿ.ಕೆ ಮಿಶ್ರಾರವರ ವರ್ಗಾವಣೆ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ನಮ್ಮ ನಡೆಯನ್ನು ನಿರ್ಧರಿಸಲಾಗುವುದು ಎಂದರು.
ತಾಲೂಕು ಘಟಕದ ಅಧ್ಯಕ್ಷ ರಾಮಣ್ಣ ಮಾತನಾಡಿ, ಡಾ.ರವೀಂದ್ರ ಅವರು ಪಿ.ಕೆ.ಮಿಶ್ರಾ ಅವರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ. ಅವರು ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.