ಮೈಸೂರು: ಜಮೀನು ವಿವಾದದ ಹಿನ್ನೆಲೆ ವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕು ಹೊನ್ನೇನಹಳ್ಳಿ ಗ್ರಾಮದ ಹೈರಿಗೆ ಬಳಿ ನಡೆದಿದೆ.
ಚಂದ್ರಶೆಟ್ಟಿ ಹಾಗೂ ಮಹದೇವಮ್ಮ ಗಾಯಗೊಂಡ ವೃದ್ಧ ದಂಪತಿ. ಕೊರೊನಾ ಹಿನ್ನೆಲೆ ಹುಣಸೂರಿನಲ್ಲಿ ಚಿಕಿತ್ಸೆ ಲಭ್ಯವಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಂಪತಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ. ಹಲವು ವರ್ಷಗಳಿಂದ ಎರಡು ಎಕರೆ ಜಮೀನಿಗಾಗಿ ಚಂದ್ರಶೆಟ್ಟಿ ಹಾಗೂ ಕಾಳೇಗೌಡ ಎಂಬುವರ ನಡುವೆ ಜಟಾಪಟಿ ನಡೆಯುತ್ತಿದೆ. ಸದ್ಯ ವಿವಾದ ನ್ಯಾಯಾಲಯದಲ್ಲಿದೆ. ಜಮೀನು ವಿಚಾರವಾಗಿ ಈ ಹಿಂದೆ ಹಲವು ಬಾರಿ ದಂಪತಿ ಮೇಲೆ ಹಲ್ಲೆ ನಡೆಸಿದ್ದ ಕಾಳೇಗೌಡ ಕುಟುಂಬದವರು, ಮಹದೇವಮ್ಮ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಯತ್ನವೂ ನಡೆಸಿದ್ದರು. ಶನಿವಾರ ಜಮೀನು ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಕಾಳೇಗೌಡ ಕುಟುಂಬದವರು, ದಂಪತಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಓದಿ : ಅಂಗಡಿ ಬಂದ್ ವೇಳೆ ಪೊಲೀಸರು-ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ
ಈ ಸಂಬಂಧ ಹಲ್ಲೆ ನಡೆಸಿದ ಆರೋಪಿಗಳಾದ ಕಾಳೇಗೌಡ, ರಾಕೇಶ್, ದೇವರಾಜ್, ರಾಮ್ ಸೇರಿದಂತೆ ಹಲವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.