ಮೈಸೂರು: ಪತ್ನಿಯ ಮೇಲಿನ ಸಂಶಯದಿಂದ ಆಕೆಯನ್ನು ಕೊಂದು ಗೋಡೆ ಕುಸಿದು ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ ಗಂಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಮ್ಮನಕಟ್ಟೆ ಗ್ರಾಮದ ಸಲ್ಮಾ (26) ಹತ್ಯೆಯಾದ ಮಹಿಳೆ. ಪತಿ ನಯೀಂ ಪಾಷ ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ.
ಘಟನೆಯ ವಿವರ:
ನಯೀಂ ಪಾಷ ತನ್ನ ಪತ್ನಿ ಸಲ್ಮಾ ಮೇಲೆ ಸಂಶಯಪಟ್ಟು, ಆಕೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮನೆಯೊಳಗಿದ್ದ ಚಪ್ಪಡಿ ಕಲ್ಲಿಗೆ ಆಕೆಯ ತಲೆಯನ್ನು ಚಚ್ಚಿ ಕೊಲೆ ಮಾಡಿದ್ದಾನೆ. ಇದು ಕೊಲೆ ಎಂದು ಗೊತ್ತಾಗದಂತೆ ಪಕ್ಕದಲ್ಲಿ ಶಿಥಿಲಗೊಂಡಿರುವ ಗೋಡೆಯನ್ನು ತಾನೇ ಬೀಳಿಸಿ ಗೋಡೆ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ ಎಂದು ಅಕ್ಕಪಕ್ಕದ ಜನರನ್ನು ನಂಬಿಸಿದ್ದಾನೆ.
ಬೀಚನಹಳ್ಳಿ ಪೊಲೀಸ್ ಠಾಣೆಗೂ ಸಹ ನನ್ನ ಹೆಂಡತಿ ಮೇಲೆ ಗೋಡೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪ್ರಕರಣ ದಾಖಲಿಸುವಂತೆ ಹೇಳಿದ್ದಾನೆ. ನಂತರ ಮನಸ್ಸು ಬದಲಾಯಿಸಿ ಪ್ರಕರಣ ದಾಖಲಿಸಿದರೆ ಮರಣೋತ್ತರ ಪರೀಕ್ಷೆಯಿಂದ ಕೊಲೆ ಎಂದು ತಿಳಿದು ಬರುವ ವಿಚಾರ ಮನಗಂಡು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ. ಕೊನೆಗೆ ಸಬ್ ಇನ್ಸ್ ಪೆಕ್ಟರ್ ಈ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಗೋಡೆಯ ಮಣ್ಣು ತೆರವುಗೊಳಿಸಿದಾಗ ಕೊಲೆ ನಡೆದಿರುವ ಅನುಮಾನ ಬಂದಿದೆ. ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಓದಿ: ಪತ್ನಿ ಮೇಲೆ ಅನುಮಾನ: ಹೊಲದಲ್ಲಿಯೇ ಸಲಾಕೆಯಿಂದ ಹೊಡೆದು ಕೊಂದ ಪತಿ
ಪೊಲೀಸರು ತನಿಖೆ ಮುಂದುವರಿಸುತ್ತಿದಂತೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಸಲ್ಮಾ ಕೊಲೆಯಾಗಿರಬಹುದು ಎಂದು ಮಾಹಿತಿ ನೀಡಿದ್ದಾನೆ. ಪತಿ ನಯೀಂ ಪಾಷನನ್ನು ವಿಚಾರಣೆಗೆ ಒಳಪಡಿಸಿದಾಗ ನಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕೊಲೆ ಪ್ರಕರಣ ಬಯಲಾಗಬಾರದೆಂದು ಮೃತದೇಹದ ಮೇಲೆ ಗೋಡೆ ಮಣ್ಣನ್ನು ನಾನೇ ಹಾಕಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.