ಮೈಸೂರು: ಅಣ್ಣನ ಮನೆಗೇ ಕನ್ನ ಹಾಕಿದ್ದ ಆರೋಪದಡಿ ಖತರ್ನಾಕ್ ತಮ್ಮ ಹಾಗೂ ಆತನ ಪತ್ನಿಯನ್ನ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿರುವ ಅಣ್ಣ ವೆಂಕಟರಾಜು ಮನೆಗೆ ಯುಗಾದಿ ಹಬ್ಬಕ್ಕೆ ಬಂದಿದ್ದ ತಮ್ಮ ಸ್ವಾಮಿ ಹಾಗೂ ಆತನ ಪತ್ನಿ ಸುನಂದಾ 3.30 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದರು ಎನ್ನಲಾಗ್ತಿದೆ.
ಘಟನೆ ವಿವರ: ಏಪ್ರಿಲ್ 14 ರಂದು ಬೆಂಗಳೂರಿನ ಮಾಗಡಿಯಿಂದ ಬಂದು ಒಂದು ವಾರ ತಂಗುವುದಾಗಿ ಹೇಳಿದ್ದ ದಂಪತಿ, ಮರುದಿನವೇ ಬೆಂಗಳೂರಿಗೆ ಹಿಂದಿರುಗಿದ್ದರು. ದಂಪತಿಯ ಈ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮಗನ ಮದುವೆಗಾಗಿ 3.30 ಲಕ್ಷ ರೂ.ಹಣವನ್ನು ಅಣ್ಣ ವೆಂಕಟರಾಜು ಕೂಡಿಟ್ಟಿದ್ದರು. ಬೀರುವಿನಲ್ಲಿಟ್ಟಿದ್ದ ಹಣವನ್ನು ಲಪಟಾಯಿಸಿ ಈ ದಂಪತಿ ಎಸ್ಕೇಪ್ ಆಗಿದ್ದಾರೆ. ಹಣದ ವಿಚಾರ ಕೇಳಿದಾಗ ಸಾಕ್ಷಿ ಏನಿದೆ ಎಂದು ಉಡಾಫೆಯಿಂದ ಉತ್ತರಿಸಿದ್ದ ಸುನಂದಾ ನಡೆಯಿಂದ ಹುಲ್ಲಹಳ್ಳಿ ಠಾಣೆಗೆ ವೆಂಕಟರಾಜು ದೂರು ದಾಖಲಿಸಿದ್ದರು.
ಆರೋಪಿಗಳಾದ ದಂಪತಿಯ ಹೆಡೆಮುರಿ ಕಟ್ಟಿ ಎಳೆ ತಂದ ಪೊಲೀಸರು, ಕಳ್ಳತನ ಮಾಡಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಓದಿ : ಮಾಂಸಕ್ಕಾಗಿ ಹಸು ಕದ್ದು ಕೊಂದ ದುರುಳರು : ಮೈಸೂರಲ್ಲಿ ಪೈಶಾಚಿಕ ಕೃತ್ಯ