ಮೈಸೂರು: ನಿನ್ನೆ ಜಂಬೂಸವಾರಿಯ ಸಂದರ್ಭದಲ್ಲಿ ಅರ್ಜುನ ಆನೆಯ ಮೇಲೆ ಕಟ್ಟಿದ್ದ ಅಂಬಾರಿ ವಾಲಲು ಕಾರಣ ಏನೆಂಬುದು ಪತ್ತೆಯಾಗಿದೆ. ಪೋಟೋ ತೆಗೆಯಲು ಹೋದ ಸಂದರ್ಭದಲ್ಲಿ ಕ್ಯಾಮೆರಾ ಫ್ಲ್ಯಾಶ್ ಆಗಿದ್ದೇ ಕಾರಣವೆಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.
ಅರಮನೆಯ ಆವರಣದ ರಾಜ ಕುಟುಂಬದವರು ವಾಸವಾಗಿರುವ ಸ್ಥಳದ ಮುಂಭಾಗದಲ್ಲಿ ಇರುವ ಅಂಬಾರಿ ಕಟ್ಟುವ ಕಂಬದ ಹತ್ತಿರ ಫೋಟೋಗ್ರಾಫರ್ ಒಬ್ಬರು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು. ಬಳಿಕ ಆನೆಯ ಫೋಟೋ ತೆಗೆಯುವಾಗ ಪೋಟೋ ಫ್ಲಾಶ್ ಅರ್ಜುನ ಆನೆಯ ಕಣ್ಣಿಗೆ ಬಿದ್ದಿದ್ದು, ಆನೆ ಗಾಬರಿಯಾಗಿದೆ. ಆ ಸಂದರ್ಭದಲ್ಲಿ ಅಂಬಾರಿ ಬಲಭಾಗಕ್ಕೆ ವಾಲಿದೆ. ಅದನ್ನು ಸರಿ ಪಡಿಸುವಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅರಮನೆಯ ಗ್ಯಾಲರಿಯಿಂದಲೇ ಕೈ ಸನ್ನೆ ಮೂಲಕ ಸೂಚನೆ ನೀಡಿದ್ದರು.
ನಂತರ ಸ್ವಲ್ಪ ಸರಿ ಪಡಿಸಿಕೊಂಡು ಪುಷ್ಪಾರ್ಚನೆಗೆ ಹೋದ ಸಂದರ್ಭದಲ್ಲೂ ಸಹ ಅಂಬಾರಿ ಬಲಭಾಗಕ್ಕೆ ವಾಲಿತ್ತು, ನಂತರ ನಿಧಾನವಾಗಿ ಹೆಜ್ಜೆ ಹಾಕಿದ ಅರ್ಜುನ ಜನ ಸಾಗರದ ಮಧ್ಯೆ ಕೋಟೆ ಆಂಜನೇಯ ಮುಂಭಾಗದ ಜಯಚಾಮರಾಜೇಂದ್ರ ವೃತ್ತದ ಬಳಿ ಬಂದಾಗ ಮತ್ತಷ್ಟು ವಾಲಿದೆ. ಆ ವೇಳೆ ಹೆಚ್ಚುವರಿಯಾಗಿ ಅಂಬಾರಿಗೆ ಕಟ್ಟಿದ್ದ ಹಗ್ಗವನ್ನು ಕುಮುಕಿ ಅನೆಯ ಮಾವುತ ಎಳೆದ ನಂತರ ಅಂಬಾರಿ ಮುಂದೆ ಸಾಗಿತು. ಬನ್ನಿಮಂಟಪದ ರಸ್ತೆಯ ಬಳಿ ಮತ್ತೊಮ್ಮೆ ಅಂಬಾರಿಯನ್ನು ಸರಿಪಡಿಸಲಾಗಿತ್ತು.
ಈ ಅಂಬಾರಿ ಕಟ್ಟುವ ಸ್ಥಳಕ್ಕೆ ಮಾಧ್ಯಮದವರಿಗೆ ಪ್ರವೇಶ ನೀಡಿರಲಿಲ್ಲ ಆದರೂ ಅತಿಕ್ರಮವಾಗಿ ಪ್ರವೇಶ ಮಾಡಿದ್ದರಿಂದ ಈ ರೀತಿಯಾಗಿದೆಯೆಂದು ಡಿಸಿಎಫ್ ಅಲೆಕ್ಸಾಂಡರ್ ಈ ಟಿವಿ ಭಾರತ್ಗೆ ದೂರವಾಣಿ ಮೂಲಕ ಖಚಿತಪಡಿಸಿದ್ದಾರೆ.