ಮೈಸೂರು: ಅರ್ಜುನ ಆನೆಗೆ ಕುಡಿಯಲು ನೀರಿಲ್ಲ, ಮೇವಿಲ್ಲ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ನೋಡಿ ಮಾವುತ ಭಾವುಕರಾಗಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದಲ್ಲಿ ದಸರಾ ಅಂಬಾರಿ ಆನೆ ಅರ್ಜುನ ಇದ್ದಾನೆ. ಇಲ್ಲಿ ಅರ್ಜುನ ಆನೆಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ, ಮಾವುತನಿಗೆ ವಾಸಿಸಲು ಮನೆಯಿಲ್ಲ ಎಂಬ ವಿಚಾರಗಳನ್ನು ಕೆಲ ಮಾಧ್ಯಮಗಳು ಪ್ರಸಾರ ಮಾಡಿವೆ.
ಬಳ್ಳೆ ಶಿಬಿರದ ಪಕ್ಕದಲ್ಲೇ ನೀರಿನ ಹಳ್ಳ ಹರಿಯುತ್ತದೆ, ಸುತ್ತ ಮುತ್ತಲು ಹಸಿರಿನ ಮೇವಿದ್ದು ಕಾಡಿನಲ್ಲಿ ಸೊಂಪಾದ ಸೊಪ್ಪಿದೆ ಎಂದು ತೋರಿಸಿ ದಯವಿಟ್ಟು ಅರ್ಜುನ ಆನೆಗೆ ನೀರಿಲ್ಲ, ಮೇವಿಲ್ಲ ನನಗೆ ವಾಸಿಸಲು ಮನೆಯಿಲ್ಲ ಎಂದು ಪ್ರಸಾರ ಮಾಡಬೇಡಿ. ಇದರಿಂದ ನನ್ನ ಹಾಗೂ ಅರ್ಜುನ ಆನೆಯ ಬಾಂಧವ್ಯ ಕಡಿಮೆ ಆಗುತ್ತದೆ. ಜೊತೆಗೆ ಬಳ್ಳೆ( ಹಿಂದಿನ ಕಾಕನಕೋಟೆ ಕಾಡಿನ ಪ್ರದೇಶ)ಶಿಬಿರದ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ದಯವಿಟ್ಟು ಇಲ್ಲದ ವಿಚಾರಗಳನ್ನು ಪ್ರಸಾರ ಮಾಡಬೇಡಿ ಎಂದರು.
ಇಲ್ಲಿ ಅರ್ಜುನ ಆನೆ ಚೆನ್ನಾಗಿದ್ದಾನೆ ಎಂದು ಹೇಳುವಾಗ ಮಾವುತ ವಿನು ಭಾವುಕನಾಗುತ್ತಾನೆ.
ಬಳ್ಳೆಯಲ್ಲಿ ಅರ್ಜುನನಿಗೆ ರಾಜಾತಿಥ್ಯ - ದಸರಾ ಜಂಬು ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಂದರ್ಭದಲ್ಲಿ ಅರ್ಜುನ ಆನೆಗೆ ರಾಜಾತಿಥ್ಯ ನೀಡಲಾಗುತ್ತದೆ. ಆದರೆ ಶಿಬಿರಕ್ಕೆ ಹೋದ ಸಂದರ್ಭದಲ್ಲಿ ನೈಸರ್ಗಿಕವಾಗಿ ಸ್ವಚ್ಛಂದವಾಗಿ ಮೇಯಲು ಬೀಡುತ್ತಾರೆ. ನಂತರ ಪ್ರತಿನಿತ್ಯ ಎಣ್ಣೆ ಮಸಾಜ್ ಮಾಡಿ ಅದಕ್ಕೆ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತದೆ. ಜೊತೆಗೆ ಶಿಬಿರದಲ್ಲಿ ಭತ್ತ ಹಾಗೂ ಇತರ ಧಾನ್ಯಗಳನ್ನು ನೀಡಲಾಗುತ್ತದೆ.