ಮೈಸೂರು: ರಾಜೀನಾಮೆಯಲ್ಲಿ ಯಾರ ಒತ್ತಡವಿಲ್ಲದೆ ರಾಜೀನಾಮೆ ಕೊಟ್ಟಿದ್ದಾರೆಯೇ, ಸಹಿ ಶಾಸಕರದ್ದೇ ಅನ್ನೋದು ಮನವರಿಕೆಯಾದರೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಬಹುದು ಎಂದು ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಅವರು ತಿಳಿಸಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ಸ್ಪೀಕರ್ ಇಲ್ಲದ ಕಾರಣ ಎಂಎಲ್ಎಗಳು ತಮ್ಮ ರಾಜೀನಾಮೆಯನ್ನು ಕಾರ್ಯದರ್ಶಿ ಅವರ ಕೈಯಲ್ಲಿ ಕೊಟ್ಟಿದ್ದಾರೆ. ಇದನ್ನು ಇಂದು ಸ್ಪೀಕರ್ ರಮೇಶ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ. ರಾಜೀನಾಮೆಯ ಬಗ್ಗೆ ಅನುಮಾನವಿದ್ದರೆ ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ತಿಳಿಸಬಹುದು. ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯ ಅನ್ವಯ ಕ್ರಮ ಜರುಗಿಸಲು ಸಾಧ್ಯವಿಲ್ಲ, ಅವರೇನಾದರು ಬೇರೆ ಪಕ್ಷ ಸೇರಿದಾಗ ಅಥವಾ ಬೇರೆ ಪಕ್ಷದ ಕೈವಾಡದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಾಕ್ಷಿ ಇದ್ದಾಗ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬಹುದು ಮಾಜಿ ಸ್ಪೀಕರ್ ಕೃಷ್ಣ ಹೇಳಿದ್ದಾರೆ.
ವೈಯಕ್ತಿಕವಾಗಿ ಹೇಳಬೇಕೆಂದರೆ ಇಂದಿನ ರಾಜಕೀಯ ಸ್ಥಿತಿ ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ. ಮೈತ್ರಿ ಪಕ್ಷಗಳು ಬುದ್ಧಿವಂತಿಕೆಯಿಂದ ಆಡಳಿತ ನಡೆಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಒಂದು ಕಾಲದಲ್ಲಿ ದೇವೇಗೌಡರ ಶಿಷ್ಯರಾಗಿದ್ದ ಸಿದ್ದರಾಮಯ್ಯ ಈ ರಾಜೀನಾಮೆಯ ಪಾತ್ರದ ಹಿಂದೆ ಇದ್ದಾರೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಏನೇ ಆದರು ಇಂದಿನ ಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಹೊಸ ಜನಾದೇಶ ಪಡೆಯುವುದು ಸೂಕ್ತ ಎನಿಸುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.