ಮೈಸೂರು: ಕೊರೊನಾ ಹಿನ್ನೆಲೆ ವಾರ್ಷಿಕ ರಥೋತ್ಸವವನ್ನು ಸರಳವಾಗಿ ಆಚರಿಸಿದ್ದೇವೆ ಎಂದು ಚಾಮುಂಡಿ ಬೆಟ್ಟದ ಪ್ರಮುಖ ಪುರೋಹಿತರಾದ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.
ಇಂದು ನವರಾತ್ರಿಯ ನಂತರ ಚಾಮುಂಡಿ ಬೆಟ್ಟದಲ್ಲಿ ನಡೆಯುವ ವಾರ್ಷಿಕ ರಥೋತ್ಸವದ ಬಗ್ಗೆ ಮಾತನಾಡಿದ ಅವರು, ಆಶ್ಲೇಷ ಮಾಸದ ಉತ್ತರ ಭಾಗ ನಕ್ಷತ್ರದ ಪ್ರಕಾರ ರಥೋತ್ಸವ ನಡೆದಿದ್ದು, ಈ ಉತ್ತರ ಭಾಗದಂದು ಬೆಳಗ್ಗೆ 9:40 ರಿಂದ 10:05 ರೊಳಗೆ ಶುಭ ಧನುರ್ ಲಗ್ನದಲ್ಲಿ ರಥೋತ್ಸವ ನಡೆದಿದೆ ಎಂದ ಅವರು, ಕೋವಿಡ್ ಹಿನ್ನೆಲೆ ಸಂಪ್ರದಾಯ ಸರಳವಾಗಿ ಆಚರಿಸಿದ್ದೇವೆ ಎಂದರು.
ನಂತರ ಮಾತನಾಡಿ, ಕೋವಿಡ್ ಹಿನ್ನೆಲೆ ಬೇರೆ ಯಾವ ದೇವಸ್ಥಾನಗಳಲ್ಲೂ ರಥೋತ್ಸವಗಳು ನಡೆದಿಲ್ಲ. ಆದರೆ, ಇದಕ್ಕೆ ಚಾಮುಂಡಿ ಬೆಟ್ಟದಲ್ಲಿ ಮಾತ್ರ ಅವಕಾಶ ಲಭಿಸಿದೆ. ಹೀಗಾಗಿ, ರಥೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಜನರನ್ನು ಸೇರಿಸದೇ, ಇಲ್ಲೇ ಇರುವ ಗ್ರಾಮಸ್ಥರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದರು.
ಅರಮನೆ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ನಡೆದುಕೊಂಡು ಬಂದಿದೆ. ದೇವಸ್ಥಾನದ ವರ್ಧಂತಿ, ಉತ್ಸವಗಳು, ರಥೋತ್ಸವಗಳಿಗೆ ಚಾಲನೆ ಕೊಡುವುದು ಮೈಸೂರು ಮಹಾರಾಜರ ಪದ್ದತಿ ಎಂದು ವಿವರಿಸಿದರು.