ಮೈಸೂರು: ಅಂಗನವಾಡಿ ಕಟ್ಟಡದ ಸೀಲಿಂಗ್ ಕಳಚಿಬಿದ್ದು ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ತೆಲಗುಮಸಳ್ಳಿ ಗ್ರಾಮದಲ್ಲಿ ನಡೆದಿದೆ. ಪೂರ್ಣಿಮಾ ಮತ್ತು ದಿಶಾಂತ್ ಎಂಬ ಮಕ್ಕಳು ಗಾಯಗೊಂಡಿದ್ದಾರೆ.
ಅಂಗನವಾಡಿಯಲ್ಲಿ ಬುಧವಾರ ಮಧ್ಯಾಹ್ನ ಊಟ ಮುಗಿಸಿ ನಿದ್ರಿಸಿದ ಸಂದರ್ಭದಲ್ಲಿ ದಿಢೀರ್ ಮೇಲ್ಛಾವಣಿ ಕುಸಿದಿದೆ. ಗಾಯಾಳು ಮಕ್ಕಳಿಗೆ ಸರಗೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗನವಾಡಿ ಕೇಂದ್ರದಲ್ಲಿ 6 ಮಕ್ಕಳ ಹಾಜರಾತಿ ಇದ್ದುದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದು, ಶಿಶು ಅಭಿವೃದ್ದಿ ಇಲಾಖೆ ಡಿ.ಡಿ. ಬಸವರಾಜು, ಸಿಡಿಪಿಒ ಆಶಾ ಸೇರಿದಂತೆ ಹಿರಿಯ ಅಧಿಕಾರಿಗಳು ಮಕ್ಕಳ ಆರೋಗ್ಯ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಆರ್ಟಿಒ ಮಧ್ಯವರ್ತಿ ಮೇಲೆ ಹಲ್ಲೆ: ಅಪರಿಚಿತ ಯುವಕರು ಆರ್ಟಿಒ ಬ್ರೋಕರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರು ರಿಂಗ್ ರಸ್ತೆ ಆರ್ಟಿಒ ಕಚೇರಿ ಬಳಿ ನಡೆದಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಹಲ್ಲೆ ಮಾಡಿದ್ದು, ಬ್ರೋಕರ್ ತಲೆಗೆ ಗಾಯವಾಗಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಗದ ಆಂಬ್ಯುಲೆನ್ಸ್.. ಸಹೋದರಿಯ ಶವ ಬೈಕ್‌ನಲ್ಲಿ ಸಾಗಿಸಿದ ಯುವಕ