ಮೈಸೂರು: ಡಾ. ಅಂಬೇಡ್ಕರ್ ಅವರ ಮನೆಯನ್ನು ಧ್ವಂಸ ಮಾಡಿರಬಹುದು. ಆದರೆ ಅವರ ವಾದವನ್ನು ಎಂದಿಗೂ ಧ್ವಂಸ ಮಾಡಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರ ಗುರು ಕಿಡಿಕಾರಿದ್ದಾರೆ.
ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಸಾಮಾಜಿಕ ಪರಮ ವಿರೋಧಿಗಳು ಅಂಬೇಡ್ಕರ್ ನಿವಾಸವನ್ನು ಧ್ವಂಸ ಮಾಡಿದ್ದಾರೆ. ಆದರೆ ಮೂಲಭೂತವಾದಿಗಳಿಂದ ಅಂಬೇಡ್ಕರ್ ವಾದವನ್ನು ಎಂದಿಗೂ ಧ್ವಂಸ ಮಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಜೆ.ಪಿ.ನಡ್ಡಾ, ಹಿಂದು ಪರಿಷತ್, ಆರ್ಎಸ್ಎಸ್ ಈ ಘಟನೆಯ ಬಗ್ಗೆ ಮೌನ ತಾಳಿರುವುದು ಕುಮ್ಮಕ್ಕು ನೀಡಿದಂತಾಗಿದೆ. ಮೂಲಭೂತವಾದಿಗಳಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಸರ್ಕಾರ ಬ್ರಾಹ್ಮಣ ಹಾಗೂ ಬಂಡವಾಳಶಾಹಿಗಳ ಸರ್ಕಾರ. ದೇಶದ ಜನರನ್ನು ಇವರ ಅಡಿಯಲ್ಲಿ ಇಡಬೇಕು ಎಂಬುವುದು ಮೋದಿಯ ಕನಸು. ಪಟ್ಟಾಭದ್ರ ಹಿತಾಸಕ್ತಿಗಳಿಗೆ ಮೋದಿ ದೇಶವನ್ನು ಒತ್ತೆ ಇಡುತ್ತಿದ್ದಾರೆ. ಬಿಎಸ್ಪಿ ಪಕ್ಷ ದಲಿತ ವಿರೋಧಿ ಪಕ್ಷ. ಅವರನ್ನು ನಂಬಿ ದಲಿತರು ಕೆಟ್ಟಿದ್ದಾರೆ. ಮುಂದೆ ನಾವು ನಮ್ಮ ಹೋರಾಟ ತೋರಿಸುತ್ತೇವೆ ಎಂದರು.
ಚಿಂತಕ ಪ್ರೊ. ಕೆ.ಎಸ್.ಭಗವಾನ್ ಮಾತನಾಡಿ, ನಾಗರಿಕತೆ ಇಲ್ಲದ ಮೂಲಭೂತವಾದಿಗಳು ಅಂಬೇಡ್ಕರ್ ಅವರ ನಿವಾಸದ ಮೇಲೆ ಕಲ್ಲು ಎಸೆದು ದ್ವಂಸ ಮಾಡಿದ್ದಾರೆ. ಅವರಿಗೆ ಒಳ್ಳೆಯದರಲ್ಲಿ ನಂಬಿಕೆ ಇಲ್ಲ. ಮೋದಿ ಸರ್ಕಾರ ಒಳಗೊಳಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.